ಬಾಳೆಹೊನ್ನೂರು ಸುತ್ತಮುತ್ತಲಿನ ವಿವಿಧೆಡೆ ಮಳೆ: ಹಲವು ಮರಬಿದ್ದು ಹಾನಿ

| Published : Mar 24 2024, 01:38 AM IST

ಬಾಳೆಹೊನ್ನೂರು ಸುತ್ತಮುತ್ತಲಿನ ವಿವಿಧೆಡೆ ಮಳೆ: ಹಲವು ಮರಬಿದ್ದು ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ಸೇರಿದಂತೆ ವಿವಿಧ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಹಿತ ಉತ್ತಮವಾದ ಮಳೆಗ್ಗಿದ್ದು, ಹಲವು ಕಡೆಗಳಲ್ಲಿ ಮರಗಳು ಉರುಳಿ ಹಾನಿಯಾಗಿದೆ. ಹಲವು ತೋಟಗಳಲ್ಲಿ ಅಡಕೆ ಮರಗಳು ಧರೆಗುರುಳಿವೆ.

ಗಾಳಿಯ ರಭಸಕ್ಕೆ ರಂಭಾಪುರಿ ಪೀಠದಲ್ಲೂ ಅವಾಂತರ । ಹೆಂಚು ಬಿದ್ದು ಮಗುವಿಗೆ ಗಾಯಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣ ಸೇರಿದಂತೆ ವಿವಿಧ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಹಿತ ಉತ್ತಮವಾದ ಮಳೆಗ್ಗಿದ್ದು, ಹಲವು ಕಡೆಗಳಲ್ಲಿ ಮರಗಳು ಉರುಳಿ ಹಾನಿಯಾಗಿದೆ. ಹಲವು ತೋಟಗಳಲ್ಲಿ ಅಡಕೆ ಮರಗಳು ಧರೆಗುರುಳಿವೆ.

ಮಧ್ಯಾಹ್ನ 3.30ರ ವೇಳೆಗೆ ಆರಂಭಗೊಂಡ ಮಳೆ ಸುಮಾರು ಅರ್ಧ ಗಂಟೆಗಳ ಕಾಲ ಉತ್ತಮವಾಗಿ ಸುರಿದಿದೆ. ಮಳೆಯೊಂದಿಗೆ ಗಾಳಿಯೂ ಜೋರಾಗಿ ಬೀಸಿದ್ದು, ಅಕ್ಷರನಗರದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಹಾನಿಯಾಗಿದೆ. ಇದೇ ಗ್ರಾಮದಲ್ಲಿ ಬೃಹತ್ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಇಟ್ಟಿಗೆ ಸೀಗೋಡು ಆದರ್ಶ ನಗರದ ಮನೆಯೊಂದರ ಮೇಲ್ಚಾವಣಿ ಮೇಲೆ ಹಲಸಿನ ಮರ ಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿನ ಯಾರಿಗೂ ಪ್ರಾಣಾಪಾಯವಾಗಿಲ್ಲ. ಮೆಣಸುಕೊಡಿಗೆ ಸಮೀಪದ ಸೋಮೇಶ್ವರ ನಗರದ ರಮೇಶ್ ಎಂಬುವರ ಮನೆಯ ಮೇಲ್ಚಾವಣಿ ಮೇಲೆ ಹಲಸಿನ ಮರದ ಕಾಯಿ ಬಿದ್ದು, ಹೆಂಚು ಪುಡಿಯಾಗಿದ್ದು, ಮನೆಯ ಒಳಗೆ ಮಲಗಿದ್ದ ಒಂದೂವರೆ ವರ್ಷದ ಹೆಣ್ಣು ಮಗುವಿನ ಮುಖಕ್ಕೆ ತಗುಲಿ ಗಾಯಗೊಂಡಿದೆ. ಮಗುವಿನ ಪೋಷಕರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಾಸ್ ಕರೆತಂದಿದ್ದಾರೆ.

ರಂಭಾಪುರಿ ಪೀಠದಲ್ಲಿ ಮಳೆಯೊಂದಿಗೆ ಗಾಳಿಯ ರಭಸ ಹೆಚ್ಚಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಪೀಠದ ಆವರಣದಲ್ಲಿ ಹಾಕಿದ್ದ ಬೃಹತ್ ಪೆಂಡಾಲ್‌ನ ಶೀಟುಗಳು ಹಾರಿಹೋಗಿವೆ. ಇದರೊಂದಿಗೆ ಸುತ್ತಮುತ್ತಲು ಹಾಕಿದ್ದ ಶಾಮಿ ಯಾನ ಗಾಳಿಗೆ ಮಗುಚಿಬಿದ್ದಿದೆ. ರೇಣುಕಾಚಾರ್ಯ ಮಂದಿರದ ಮೇಲ್ಚಾವಣಿಗೆ 50ಕ್ಕೂ ಹೆಚ್ಚು ಹೆಂಚುಗಳು ಹಾರಿಬಿದ್ದು ಪುಡಿಯಾಗಿದೆ. ಇದರೊಂದಿಗೆ ಜಾತ್ರೆಗೆ ಶ್ರೀಪೀಠದಲ್ಲಿ ಹಾಕಿದ್ದ ವಿವಿಧ ಅಂಗಡಿಗಳ ಟಾರ್ಪಲ್‌ಗಳು ಹಾರಿ ಹೋಗಿದ್ದು, ವ್ಯಾಪಾರಿಗಳು ತೊಂದರೆ ಅನುಭವಿಸಿದ್ದರು. ವಿದ್ಯುತ್ ದೀಪ ಅಲಂಕರಿಸಿದ್ದ ಲೈಟಿಂಗ್ಸ್ ಸಿಸ್ಟೆಮ್‌ಗಳು ಗಾಳಿಗೆ ಹಾರಿ ಹೋಗಿವೆ.

ಒಟ್ಟಾರೆ ಮಳೆಯೊಂದಿಗೆ, ಗಾಳಿ ಬಂದು ಹಾನಿ ಮಾಡಿದ್ದರೂ ಸಹ ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರು ಮಳೆಯ ನಿರೀಕ್ಷೆಯಲ್ಲಿದ್ದು ಶನಿವಾರ ಸುರಿದ ಮಳೆ ಸ್ವಲ್ಪ ಪ್ರಮಾಣದಲ್ಲಿ ತಂಪನ್ನು ನೀಡಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದ ಹಲವು ಕಡೆಗಳಲ್ಲಿ ಮೋಡದ ವಾತಾವರಣವಿದ್ದು ಜನರು ಮಳೆ ನಿರೀಕ್ಷೆಯಲ್ಲಿದ್ದರು. ಈ ಬಾರಿ ಅತೀವವಾದ ಬಿಸಿಲಿನ ಪ್ರಭಾವದಿಂದಾಗಿ ಕೆರೆ, ನದಿ, ಹಳ್ಳಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ರೈತರು, ಬೆಳೆಗಾರರು ತೋಟಗಳಿಗೆ ನೀರು ಹಾಯಿಸಲಾಗದೆ ತೊಂದರೆಯಲ್ಲಿದ್ದರು.

ಶನಿವಾರ ಸುರಿದ ಮಳೆಯಿಂದಾಗಿ ತೋಟಗಳಿಗೆ ಅನುಕೂಲವಾಗಿದ್ದು, ಭಾನುವಾರವೂ ಮಳೆ ಬಂದರೆ ಮತ್ತಷ್ಟು ಉತ್ತಮವಾಗಿ ತಂಪಿನ ವಾತಾವರಣ ಉಂಟಾಗಿದೆ. ಬಾಳೆಹೊನ್ನೂರು ಪಟ್ಟಣ ಸೇರಿದಂತೆ ರಂಭಾಪುರಿ ಪೀಠ, ಮೆಣಸುಕೊಡಿಗೆ, ಮಸೀದಿ ಕೆರೆ, ಅರಳೀಕೊಪ್ಪ, ಸೀಕೆ, ವಾಟುಕೊಡಿಗೆ, ಇಟ್ಟಿಗೆ, ಕಡಬಗೆರೆ, ಖಾಂಡ್ಯ, ಕಡ್ಲೇಮಕ್ಕಿ, ಅಕ್ಷರನಗರ ಮುಂತಾದ ಕಡೆಗಳಲ್ಲಿ ಮಳೆ ಬಂದಿದೆ.

೨೩ಬಿಹೆಚ್ ಆರ್ ೬:

ಬಾಳೆಹೊನ್ನೂರಿನಲ್ಲಿ ರಂಭಾಪುರಿ ಪೀಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಿದ್ದ ಶಾಮಿಯಾನ ಮಳೆಗೆ ಉರುಳಿ ಬಿದ್ದಿರುವುದು.೨೩ಬಿಹೆಚ್‌ಆರ್ ೭:

ಮೇಲ್ಚಾವಣಿಯ ಹೆಂಚು ಪುಟಾಣಿ ಬಾಲಕಿಗೆ ಬಿದ್ದು ಗಾಯಗೊಂಡಿರುವುದು.