ಸಾರಾಂಶ
ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲುಕಿನಲ್ಲಿ ಭಾರಿ ಮಳೆಯಾಗಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಭಾರಿ ಮಳೆಗೆ ಕದನೂರು ಹೊಳೆ ತುಂಬಿ ಹರಿಯುತ್ತಿದೆ. ನದಿ ಪ್ರವಾಹದಿಂದ ತಗ್ಗು ಪ್ರದೇಶದ ಹೊಲಗದ್ದೆಗಳಿಗೆ ಹೊಳೆ ನೀರು ನುಗ್ಗಿ ಸಂಪೂರ್ಣ ಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಳೆದ ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಜಿಲ್ಲೆಯಾದ್ಯಂತ ಬುಧವಾರ ಚುರುಕುಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆ ಮಳೆ ಸುರಿದಿದೆ.ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ಆರಂಭದಿಂದಲೂ ಬಿಸಿಲಿನ ವಾತಾವರಣ ಇತ್ತು. ಜುಲೈ ತಿಂಗಳಲ್ಲಿ ಭಾರಿ ಮಳೆ ಸುರಿದಿತ್ತು. ಆಗಸ್ಟ್ ನಲ್ಲೂ ಕೂಡ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು. ಆದರೆ ಆಗಸ್ಟ್ ನಲ್ಲಿ ಮಳೆ ಬಹುತೇಕ ಕ್ಷೀಣಗೊಂಡಿದೆ. ಇದೀಗ ತಿಂಗಳ ಕೊನೆಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದೆ.
ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲುಕಿನಲ್ಲಿ ಭಾರಿ ಮಳೆಯಾಗಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಭಾರಿ ಮಳೆಗೆ ಕದನೂರು ಹೊಳೆ ತುಂಬಿ ಹರಿಯುತ್ತಿದೆ. ನದಿ ಪ್ರವಾಹದಿಂದ ತಗ್ಗು ಪ್ರದೇಶದ ಹೊಲಗದ್ದೆಗಳಿಗೆ ಹೊಳೆ ನೀರು ನುಗ್ಗಿ ಸಂಪೂರ್ಣ ಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ. ಕಳೆದ ಎರಡು ತಿಂಗಳಲ್ಲಿ ನಾಲ್ಕನೆ ಬಾರಿಗೆ ಗದ್ದೆಗಳು ಜಲಾವೃತವಾಗಿವೆ.ಈ ಭಾಗದ ರೈತರು ಗದ್ದೆಯಲ್ಲಿ ನೀರು ತಗ್ಗಿದಾಗ ಉಳುಮೆ ಮಾಡಿ ನಾಟಿ ಕಾರ್ಯಕ್ಕೆ ರೈತರು ಸಿದ್ಧಮಾಡಿಕೊಂಡಿದ್ದರು. ಆದರೆ ಈಗ ಗದ್ದೆಗಳಿಗೆ ಪುನಃ ನೀರು ತುಂಬಿದ ಹಿನ್ನೆಲೆ ನಾಟಿ ಕಾರ್ಯ ಮಾಡಲಾಗದೆ ರೈತರು ಪರದಾಡುವಂತಾಗಿದೆ. ಮಳೆ ಮುಂದುವರಿದಲ್ಲಿ ಗದ್ದೆಗಳಲ್ಲಿ ಮತ್ತಷ್ಟು ನೀರು ಹೆಚ್ಚುವ ಸಾಧ್ಯತೆ ಎದುರಾಗಿದೆ. ನಾಟಿ ಕಾರ್ಯ ವಿಳಂಬ ಆದಲ್ಲಿ ಬೆಳೆಗೆ ತೊಂದರೆ ಆಗುವ ಆತಂಕ ಉಂಟಾಗಿದೆ.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 12.32 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 19.22 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 6.85 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 14 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 18.60 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 2.90 ಮಿ.ಮೀ. ಮಳೆಯಾಗಿದೆ.