ಧಾನ್ಯಗಳನ್ನು ಒಣಗಿಸಲು ಬಿಡುತ್ತಿಲ್ಲ ಮಳೆ: ರೈತರ ಅಳಲು

| Published : Oct 18 2024, 12:06 AM IST

ಸಾರಾಂಶ

ಸಂಡೂರು ತಾಲೂಕಿನಲ್ಲಿ ಹಿಂದಾಗಿ ಬಿತ್ತನೆ ಮಾಡಿದ್ದ ಕೆಲವು ರೈತರು ಮೆಕ್ಕೆಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಕಟಾವು ಮಾಡಲು ಮುಂದಾಗಿದ್ದರೂ, ಮಳೆ ಅದಕ್ಕೆ ಅವಕಾಶ ಕೊಡುತ್ತಿಲ್ಲ. ಕೆಲವರು ಕಟಾವು ಮಾಡಿ ಗೂಡು ಹಾಕಿಕೊಂಡಿದ್ದರೆ, ಮಳೆಯಿಂದಾಗಿ ಗೂಡಿನಿಂದ ತೆನೆಗಳನ್ನು ಬೇರ್ಪಡಿಸಲಾಗುತ್ತಿಲ್ಲ.

ಸಂಡೂರು: ಒಂದೆಡೆ ಮೋಡ ಮುಸುಕಿದ ವಾತಾವರಣ, ಮತ್ತೊಂದೆಡೆ ಬಿಟ್ಟುಬಿಟ್ಟು ಜಿನುಗುವ ಮಳೆ ರಾಶಿ ಹಾಕಿದ ಧಾನ್ಯಗಳನ್ನು ಒಣಗಿಸಲು ಬಿಡುತ್ತಿಲ್ಲ. ಮಳೆ ಹೀಗೆ ಮುಂದುವರಿದರೆ, ಎಲ್ಲಿ ಕಾಳುಗಳು ಮೊಳಕೆ ಒಡೆಯುತ್ತವೆಯೋ ಎಂಬ ಆತಂಕ ರೈತರದ್ದಾಗಿದೆ.

ಹಿಂದಾಗಿ ಬಿತ್ತನೆ ಮಾಡಿದ್ದ ಕೆಲವು ರೈತರು ಮೆಕ್ಕೆಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಕಟಾವು ಮಾಡಲು ಮುಂದಾಗಿದ್ದರೂ, ಮಳೆ ಅದಕ್ಕೆ ಅವಕಾಶ ಕೊಡುತ್ತಿಲ್ಲ. ಕೆಲವರು ಕಟಾವು ಮಾಡಿ ಗೂಡು ಹಾಕಿಕೊಂಡಿದ್ದರೆ, ಮಳೆಯಿಂದಾಗಿ ಗೂಡಿನಿಂದ ತೆನೆಗಳನ್ನು ಬೇರ್ಪಡಿಸಲಾಗುತ್ತಿಲ್ಲ. ಕೆಲವರು ಕಟಾವು ಮಾಡಿದ ತೆನೆಗಳನ್ನು ಮಷಿನ್‌ಗೆ ಹಾಕಿ, ತೆನೆಯಿಂದ ಧಾನ್ಯಗಳನ್ನು ಬೇರ್ಪಡಿಸಲಾಗುತ್ತಿಲ್ಲ. ಕೆಲವರು ತೆನೆಗಳಿಂದ ಧಾನ್ಯಗಳನ್ನು ಬೇರ್ಪಡಿಸಿದ್ದರೂ, ಅವುಗಳನ್ನು ಒಣಗಿಸಲಾಗುತ್ತಿಲ್ಲ. ಮಳೆಯಿಂದಾಗಿ ರೈತರು ಹಲವು ರೀತಿಯ ಸಮಸ್ಯೆಯನ್ನು ಎದುರಿಸುವಂತಾಗಿದೆ.

ಅತಿಯಾದ ಮಳೆಯಿಂದಾಗುತ್ತಿರುವ ತೊಂದರೆ ಕುರಿತು ''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ದೌಲತ್‌ಪುರದ ರೈತ ಮುಖಂಡ ವಿ.ಜೆ. ಶ್ರೀಪಾದಸ್ವಾಮಿ, ಕಾಟಿನಕಂಬದ ರೈತ ಎ. ಮರಿಸ್ವಾಮಿ, ಬಿಟ್ಟುಬಿಟ್ಟು ಮಳೆ ಸುರಿಯುತ್ತಿರುವುದರಿಂದ, ರೈತರಿಗೆ ತಾವು ಕಟಾವು ಮಾಡಿದ ಬೆಳೆಗಳನ್ನು ಜಿನ್ನಿಗೆ ಹಾಕಿಸಲು, ಒಣಗಿಸಲು ಆಗುತ್ತಿಲ್ಲ. ಮಳೆ ಹೀಗೆ ಮುಂದುವರಿದರೆ, ತೆನೆಯಲ್ಲಿಯೇ ಕಾಳುಗಳು ಮೊಳಕೆ ಒಡೆಯುವ ಸಂಭವವಿದೆ. ಈ ಬಾರಿ ಮಳೆ ಹೆಚ್ಚಾದ ಕಾರಣ, ಭೂಮಿಯಲ್ಲಿ ನೀರಿನ ಅಂಶ ಹೆಚ್ಚಾಗಿ, ಹೆಚ್ಚಿನ ಇಳುವರಿ ಬಂದಿಲ್ಲ. ಇದೀಗ ಬಂದಿರುವ ಬೆಳೆಗೂ ಬಿಟ್ಟುಬಿಟ್ಟು ಸುರಿಯುತ್ತಿರುವ ಮಳೆಯಿಂದ ತೊಂದರೆ ಉಂಟಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ನಿರಂತರ ಮಳೆಗೆ ಕುಸಿದು ಬಿದ್ದ 4 ಮನೆಗಳು:

ಹೂವಿನಹಡಗಲಿ ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ, ಮಣ್ಣಿನ ಮನೆಗಳು ಕುಸಿದು ಬಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಕರಬ್ಬಿ, ಕುರುವತ್ತಿ, ಕತ್ತೆಬೆನ್ನೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಮಣ್ಣಿನ ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಮಳೆಗೆ ಮನೆ ಬಿದ್ದಿರುವ ಹಿನ್ನೆಲೆಯಲ್ಲಿ ವಾಸಕ್ಕೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರಿಂದ ಸರ್ಕಾರ ಕೂಡಲೇ ಸೂಕ್ತ ಪರಿಹಾರದ ನೀಡಬೇಕು, ಇಲ್ಲವೇ ಅಶ್ರಯ ಮನೆ ಮಂಜೂರು ಮಾಡಬೇಕೆಂದು ಜನ ಒತ್ತಾಯಿಸಿದ್ದಾರೆ.ತಾಲೂಕಿನ ವಿವಿಧ ಕಡೆಗಳಲ್ಲಿ ಮೆಕ್ಕೆಜೋಳ ಕೊಯ್ಲಿಗೆ ಬಂದಿದೆ. ನಿರಂತರ ಮಳೆಯಿಂದ ಜಮೀನುಗಳಲ್ಲಿ ತೆನೆಗಳು ನೆಲಕ್ಕೆ ಬಿದ್ದು, ಮೊಳಕೆ ಒಡೆಯುತ್ತಿವೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈಗಾಗಲೇ ಕೊಯ್ಲು ಆಗಿರುವ ಮೆಕ್ಕೆಜೋಳ ಒಣಗಿಸಲು ರಸ್ತೆ ಮೇಲೆ ಹಾಕಿದ್ದಾರೆ. ಮಳೆ ನೀರಿಗೆ ನೆನೆದು ಹಾನಿಯಾಗುತ್ತಿವೆ. ತಾಲೂಕಿನ ಬ್ಯಾಲಹುಣ್ಸಿ, ಅಂಗೂರು, ಮಕರಬ್ಬಿಗ್ರಾಮದ ಬತ್ತದ ಬೆಳೆಗಳು ಮಳೆ ಗಾಳಿಗೆ ನೆಲಕ್ಕೆ ಬಿದ್ದಿವೆ. ಇದರಿಂದ ಬತ್ತದ ಕಾಳು ನೆಲಕ್ಕೆ ಉದುರಿ ಬಿದ್ದಿವೆ. ಇದರಿಂದ ರೈತರು ಹಾನಿ ಅನುಭವಿಸುವಂತಾಗಿದೆ.

ಹೊಸಪೇಟೆಯಲ್ಲಿ ಸುರಿದ ಮಳೆ:

ವಿಜಯನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಹೊಸಪೇಟೆ, ಕಮಲಾಪುರ ಮತ್ತು ಹಂಪಿ ಭಾಗದಲ್ಲಿ ಗುರುವಾರ ಭರ್ಜರಿ ಮಳೆ ಸುರಿದಿದೆ.ಮಳೆಯಿಂದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಮೆಕ್ಕೆಜೋಳ ಕೊಯ್ಲಿಗೆ ಬಂದಿದ್ದು, ಮಳೆ ಬಿಡುವು ನೀಡದ್ದರಿಂದ ರೈತರು ಕೂಡ ಕಂಗಾಲಾಗಿದ್ದಾರೆ. ಮಳೆ ನಿಂತರೆ, ಬದುಕು ಹಸನಾಗಲಿದೆ ಎಂದು ರೈತರು ಆಗಸ ನೋಡುವಂತಾಗಿದೆ.

ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣ ನೆಲೆಗೊಂಡಿದ್ದು, ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ರಸ್ತೆಗಳಲ್ಲಿ ನೀರು ನಿಂತಿದ್ದು, ಮಳೆಯಲ್ಲಿ ಹೊರ ಬರಲಾಗದೇ ಜನರು ಪರದಾಡುವಂತಾಗಿದೆ. ಇನ್ನೂ ಮಾರುಕಟ್ಟೆ, ಅಂಗಡಿ, ಬಸ್‌ ನಿಲ್ದಾಣಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.ಬಳ್ಳಾರಿ ಜಿಲ್ಲೆಯ ಹಲವೆಡೆ ಗುರುವಾರ ಬೆಳಗ್ಗೆ ಸಾಧಾರಣ ಮಳೆ ಸುರಿದಿದೆ.