ಸಾರಾಂಶ
- ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಹಿತಿ । ವಾಡಿಕೆಗೂ ಮೀರಿ ಒಂದೇ ವಾರದಲ್ಲಿ ಶೇ.166 ರಷ್ಟು ಮಳೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗೂ ಮೀರಿ ಮಳೆ ಬಂದಿದೆ. ಮಳೆಯಿಂದ ಈವರೆಗೆ ಸುಮಾರು 100 ಕೋಟಿ ರು. ನಷ್ಟವಾಗಿದೆ. ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಹಣದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.
ಜನವರಿ 1 ರಿಂದ ಜುಲೈ 22 ರವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 889 ಮಿ.ಮೀ. ಆದರೆ, ಈವರೆಗೆ 1096 ಮಿ.ಮೀ. ಮಳೆ ಬಂದಿದೆ. ಅಂದರೆ, ಶೇ. 24 ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕಳೆದ 6 ತಿಂಗಳಿಗೆ ಹೋಲಿಕೆ ಮಾಡಿದರೆ ಜುಲೈ ತಿಂಗಳಲ್ಲಿ ಭಾರೀ ಮಳೆಯಾಗಿದೆ. ಕಳೆದ ಏಳು ದಿನಗಳಲ್ಲಿ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 124 ಮಿ.ಮೀ., ಇದೇ ಅವಧಿಯಲ್ಲಿ 329 ಮಿ.ಮೀ. ಮಳೆ ಬಂದಿದೆ. ಅಂದರೆ, ಶೇ. 166 ರಷ್ಟು ಮಳೆಯಾಗಿದೆ ಎಂದ ಅವರು, ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ, ಕಳೆದ ವರ್ಷ ಇದೇ ಅವಧಿಯಲ್ಲಿ 144.1 ಅಡಿಗಳಷ್ಟಿತ್ತು. ಇದೀಗ 166.6 ಅಡಿಗಳಷ್ಟಿದೆ. 25,367 ಕ್ಯೂಸೆಕ್ ಒಳ ಹರಿವು ಇದ್ದು, 193 ಹೊರ ಹರಿವು ಇದೆ. ಇದೇ ರೀತಿಯಲ್ಲಿ ಜಿಲ್ಲೆಯಲ್ಲಿ ಮಳೆ ಮುಂದುವರಿದರೆ ಇನ್ನೂ 5- 6 ದಿನಗಳಲ್ಲಿ ಭದ್ರಾ ಜಲಾಶಯ ಭರ್ತಿಯಾಗಲಿದೆ ಎಂದು ಹೇಳಿದರು.
ಹವಮಾನ ಇಲಾಖೆ ಮಾಹಿತಿ ಪ್ರಕಾರ ಈ ವಾರದಲ್ಲಿ ಜಾಸ್ತಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಮುಂದಿನ ವಾರದಲ್ಲಿ ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಅದರಿಂದಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.ಈ ಬಾರಿ ಮಳೆ ಹಾಗೂ ಗಾಳಿಯಿಂದಾಗಿ ಈವರೆಗೆ 192 ಮನೆಗಳಿಗೆ ಹಾನಿ ಸಂಭವಿಸಿದೆ. ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಹಾನಿ ಪ್ರಮಾಣ ಹೆಚ್ಚಾಗಿದೆ. ಗಾಳಿಗೆ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ಭಾಗಶಃ ಹಾನಿಯಾಗಿದ್ದ 114 ಮನೆಗಳ ಪೈಕಿ 58 ಮನೆಗಳಿಗೆ 69.5 ಲಕ್ಷ, ಇತರೆ ಶೇ. 25ಕ್ಕಿಂತ ಹೆಚ್ಚು ಹಾನಿಯಾಗಿರುವ 70 ಮನೆಗಳ ಪೈಕಿ 19 ಮನೆಗಳಿಗೆ 1.09 ಲಕ್ಷ ರು. ಪರಿಹಾರ ನೀಡಲಾಗಿದೆ. ಹಾನಿಯಾದ ಮನೆಗಳ ಪೈಕಿ 43 ಮನೆಗಳಿಗೆ ಖಾತೆ ಇಲ್ಲ ಎಂದು ಹೇಳಿದರು.ಪಿಡಬ್ಯ್ಲೂಡಿ:
ಲೋಕೋಪಯೋಗಿ ಇಲಾಖೆಗೆ ಸೇರಿದ 8.04 ಕಿ.ಮೀ. ರಸ್ತೆಗೆ ಹಾನಿಯಾಗಿದ್ದು, ಸದ್ಯದ ಅಂದಾಜು ಪ್ರಕಾರ 56.72 ಕೋಟಿ ರು. ಹಾನಿಯಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿರುವ 27 ಕಿರು ಸೇತುವೆ, 12 ಪ್ರಾಥಮಿಕ ಶಾಲೆಗಳು, 10 ಸರ್ಕಾರಿ ಕಟ್ಟಡಗಳು ಹಾಗೂ ರಸ್ತೆಗಳು ಸೇರಿದಂತೆ 48.82 ಕೋಟಿ ರು. ಹಾನಿಯಾಗಿದೆ ಎಂದ ಜಿಲ್ಲಾಧಿಕಾರಿ, ತಾತ್ಕಾಲಿಕವಾಗಿ ರಸ್ತೆ ಸಂಪರ್ಕ ಇತರೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರ 4 ಕೋಟಿ ರು. ಬಿಡುಗಡೆ ಮಾಡಿದೆ. ಈಗಾಗಲೇ 35 ಕಾಮಗಾರಿಗಳ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, ಇನ್ನು 2-3 ವಾರಗಳಲ್ಲಿ ಕಾಮಗಾರಿ ಮುಗಿಸಲು ಸರ್ಕಾರ ಸೂಚನೆ ನೀಡಿದೆ ಎಂದು ಹೇಳಿದರು.ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ 80ಕ್ಕೂ ಹೆಚ್ಚು ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿ, 19 ಲಕ್ಷ ರು. ನಷ್ಟ ಸಂಭವಿಸಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ತೋಟಗಾರಿಕಾ ಬೆಳೆಗಳಿಗೆ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕಾಫಿ ಬೆಳಗೆ ಕೊಳೆರೋಗ ಕಾಣಿಸಿಕೊಂಡಿದೆ ಎಂದು ಕಾಫಿ ಬೆಳೆಗಾರರು ಮಾಹಿತಿ ನೀಡಿದ್ದಾರೆ. ಕಾಫಿ ಜೊತೆಗೆ ಕಾಳು ಮೆಣಸು ಏಲಕ್ಕಿ ಬೆಳೆಗಳಿಗೂ ಏನಾದರೂ ಸಮಸ್ಯೆಯಾಗಿದೆಯೇ ಎಂದು ಪರಿಶೀಲನೆ ನಡೆಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.ಸಂಪಾಜೆ ಘಾಟ್ ನಲ್ಲಿ ವಾಹನ ಸಂಚಾರ ಬಂದ್ ಆಗಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಶಿರಡಿ ಘಾಟಿಯಲ್ಲಿ ಹಗಲು ಸಂಚಾರಕ್ಕೆ ಅವಕಾಶವಿರುವುದೆ. ಹೀಗಾಗಿ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರದಟ್ಟಣೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಚಾರ್ಮಾಡಿ ಘಾಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಜೊತೆಗೆ ಹಾಸನ, ಉಡುಪಿ, ಮಂಗಳೂರು ಜಿಲ್ಲಾಧಿಕಾರಿಗಳ ಜೊತೆಯೂ ಚರ್ಚೆ ಮಾಡಿದ್ದೇವೆ. ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಕವಿದ ವಾತಾವರಣ ನಿರ್ಮಾಣ ವಾಗಲಿದ್ದು, ಕೊಟ್ಟಿಗೆಹಾರದಲ್ಲಿರುವ ಚೆಕ್ ಪೋಸ್ಟ್ ಬಳಿಯೇ ವಾಹನಗಳನ್ನು ನಿಯಂತ್ರಿಸಲಾಗುತ್ತದೆ. ನಿಯಮಿತ ವಾಹನ ಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಚ್. ಕೀರ್ತನಾ ಉಪಸ್ಥಿತರಿದ್ದರು. 22 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಡಿಸಿ ಮೀನಾ ನಾಗರಾಜ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್ಪಿ ಡಾ.ವಿಕ್ರಂ ಅಮಟೆ, ಜಿಪಂ ಸಿಇಒ ಕೀರ್ತನಾ ಇದ್ದರು.