ಸಾಣೇಹಳ್ಳಿ ಗ್ರಾಮದಲ್ಲಿ ಶನಿವಾರ ಮೊದಲ ಹೊನ್ನಾರು ಬೇಸಾಯ ಕ್ಕೆ ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಯುಗಾದಿ ಹಬ್ಬ ಹಿಂದೂಗಳಿಗೆ ಹೊಸ ವರ್ಷವಾಗಿದ್ದು ಚಂದ್ರನನ್ನು ನೋಡಿದಾಗ ಈ ವರ್ಷದ ಮಳೆ ಬೆಳೆ ಬಗ್ಗೆ ಲೆಕ್ಕಾಚಾರ ಹಾಕುವುದುಂಟು ಆದರೆ ಈ ಬಾರಿ ಯುಗಾದಿ ಹಬ್ಬದ ದಿನವೇ ಉತ್ತಮ ಮಳೆಯಾಗಿದ್ದರಿಂದ ರೈತರಲ್ಲಿ ಮೊಗದಲ್ಲಿ ಸಂತಸ ವನ್ನು ಮೂಡಿಸಿದೆ.

ರೈತರು ಹಬ್ಬದ ಮಾರನೇ ದಿನದಿಂದಲೇ ಕೃಷಿ ಚಟುವಟಿಕೆಗಳಿಗೆ ಮುನ್ನುಡಿ ಬರೆಯುವ ಸಲುವಾಗಿ ಸಂಪ್ರದಾಯದಂತೆ ಗ್ರಾಮದ ಹಿರಿಯರು, ಗೌಡರು ಗ್ರಾಮ ದೇವತೆಗೆ ಪೂಜಿ ಸಲ್ಲಿಸಿ, ಹೊನ್ನಾರು ಊಡುವ ಸಂಪ್ರದಾಯ ಗ್ರಾಮಗಳಲ್ಲಿ ಹಿಂದಿನಿಂದಲೂ ನಡೆದು ಬಂದಿದೆ.

ಆದರೆ ಇನ್ನೂ ಕೆಲವು ಗ್ರಾಮಗಳಲ್ಲಿ ಯಾವ ರೈತನ ಹೆಸರಿಗೆ ಗುರು ಬಲವಿದೆ ಅಂಥವರ ಕೈಯಲ್ಲಿ ಪೂಜೆ ಸಲ್ಲಿಸಿ ಹೊನ್ನಾರು ಊಡಿಸುವ ಸಂಪ್ರದಾಯವೂ ಇದೆ.

ಅದರಂತೆ ತಾಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ಗ್ರಾಮ ದೇವರಾದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮಸ್ಥರು ಪೂಜೆ ನೆರವೇರಿಸಿ ನಂತರ ದೇವರ ಅಪ್ಪಣೆ ಪಡೆದ ನಂತರ ಪುರೋಹಿತರನ್ನು ಕೇಳಿ ಈ ಬಾರಿ ಲೋಕೇಶಪ್ಪ ಎಂಬವರ ಹೆಸರು ಬಲದಿಂದ ಗ್ರಾಮದ ಮೊದಲ ಹೊನ್ನಾರ ಬೇಸಾಯವನ್ನು ಮಾಡಿಸಿದರೆ ಉತ್ತಮ ಬೆಳೆ ಯಾಗುತ್ತದೆ ಎಂಬ ನಂಬಿಕೆ ಆಧಾರದ ಮೇಲೆ ಲೋಕೇಶಪ್ಪ ಎಂಬ ರೈತರಿಂದ ಎತ್ತು ಹಾಗೂ ನೇಗಿಲುಗಳಿಗೆ ಪೂಜಿಸಲ್ಲಿಸಿ ಗ್ರಾಮದ ಸುತ್ತಲೂ ನೇಗಿಲ ಗೆರೆ ಬೇಸಾಯ ಮಾಡಿದ ನಂತರ ಊರಿನ ಉಳಿದ ರೈತರು ಎತ್ತುಗಳನ್ನು ಸ್ನಾನ ಮಾಡಿಸಿ ಸಿಂಗರಿಸಿ ಬೇಸಾಯದ ಕುಂಟೆ ನೇಗಿಲು ಉಳಿದ ಪರಿಕರಗಳನ್ನು ತೊಳೆದು ಸಿಂಗರಿಸಿ ಸಿಹಿ ಅಡುಗೆ ಮಾಡಿ ದೇವರಿಗೆ ಅರ್ಪಿಸುವ ಮೂಲಕ ಅವರವರ ಸ್ವಂತ ಜಮೀನಿನಲ್ಲಿ ಮೊದಲ ಹೊನ್ನಾರ ಬೇಸಾಯವನ್ನು ಹೂಡಿದರು.

ದೇವರ ಅಪ್ಪಣೆ ಇಲ್ಲದೆ ಯಾರೋಬ್ಬರೂ ಬೇಸಾಯ ಮಾಡುವುದಿಲ್ಲ. ಈ ಬಾರಿ ಮಳೆ ಬಂದಿದೆ ಸಕಾಲಕ್ಕೆ ದೇವರ ಅಪ್ಪಣೆ ಕೂಡ ಆಗಿದೆ. ಉತ್ತಮ ಮಳೆ ಬೆಳೆ ಆಗುವುದು ಎಂಬ ಆಶಯದೊಂದಿಗೆ ಸಂತಸದಿಂದ ಮೊದಲ ಹೊನ್ನಾರ ಬೇಸಾಯವನ್ನು ಮಾಡಲಾಗಿದೆ ಸ್ಥಳೀಯ ರೈತ ಸಾಚ ಮಂಜುನಾಥ್ ತಿಳಿಸಿದರು.