ಸಾರಾಂಶ
ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರತೆ ಪಡೆದುಕೊಳ್ಳುವ ಮೂಲಕ ಬಿರುಸಿನ ಮಳೆಯಾಗುತ್ತಿದೆ.
ಸುಬ್ರಮಣಿ. ಆರ್.
ಕನ್ನಡಪ್ರಭ ವಾರ್ತೆ ಸಿದ್ದಾಪುರಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ತೀವ್ರತೆ ಪಡೆದುಕೊಳ್ಳುವ ಮೂಲಕ ಬಿರುಸು ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಶುಕ್ರವಾರದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದ ಕಾವೇರಿ ನದಿ ತೋಡುಗಳು ಉಕ್ಕಿ ಹರಿಯುತ್ತಿದೆ. ಪಟ್ಟಣ ಪ್ರದೇಶಗಳಲ್ಲಿ ಮಳೆ ನೀರು ಚರಂಡಿಗಳಲ್ಲಿ ಉಕ್ಕಿ ರಸ್ತೆಯ ಮೇಲೆ ಹರಿಯುತ್ತಿದೆ. ಬಿರುಸು ಮಳೆಯಿಂದಾಗಿ ಜನಜೀವನ ಅಸ್ತವಸ್ತಗೊಂಡಿದ್ದು. ಬೀಸುತ್ತಿರುವ ಶೀತಗಾಳಿ, ಚಳಿಯ ವಾತಾವರಣದಿಂದ ಮನೆಯಿಂದ ಹೊರ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ.ವಿದ್ಯುತ್ ಇಲ್ಲದೆ ಕಂಗಾಲು: ಎಡೆಬಿಡದೆ ಸುರಿಯುತಿರುವ ಮಳೆಗೆ ಹಲವೆಡೆ ಮರಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಕಂಬಗಳು ತಂತಿಗಳು ತುಂಡಾಗಿ ಎರಡು ದಿನಗಳಿಂದ ವಿದ್ಯುತ್ ಇಲ್ಲದಾಗಿದೆ. ವಿದ್ಯುತ್ ಕೈಕೊಟ್ಟ ಪರಿಣಾಮ ನೀರಿಲ್ಲದೆ ಹೊಟೇಲ್ ಗಳು ಬಾಗಿಲು ಹಾಕಿವೆ. ಹೋಟೆಲ್ ಮತ್ತು ಮಾಂಸದ ಅಂಗಡಿಗಳ ಫ್ರೀಡ್ಜ್ ನಲ್ಲಿಟ್ಟಿದ್ದ ಪದಾರ್ಥಗಳು ಮತ್ತು ಮಾಂಸ ಕೆಟ್ಟು ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ. ವಿದ್ಯುತ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡಲಾಗದೆ ಸಾರ್ವಜನಿಕರು ಪರದಾಡುವಂತಾಗಿದ್ದು ಜನರೇಟರ್ ಇರುವ ಅಂಗಡಿಗಳಿಗೆ ತೆರಳಿ ಮೊಬೈಲ್ ಜಾರ್ಚ್ ಮಾಡಿಕೊಡಿ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿತ್ತು.ನದಿ ನೀರು ಏರಿಕೆಸತತವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ಗೂಡುಗದ್ದೆ ಕುಂಬಾರಗುಂಡಿ ಬರಡಿ ಪ್ರದೇಶಗಳಲ್ಲಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾವೇರಿ ನದಿ ನೀರಿನ ಮಟ್ಟ ಗಣನೀಯವಾಗಿ ಏರುತ್ತಿದ್ದು ನದಿ ದಡದ ನಿವಾಸಿಗಳ ನಿದ್ದೆಗೆಡಿಸಿದೆ.ಮನೆ ಮೇಲೆ ಬಿದ್ದ ಮರ ಹಾನಿವಿರಾಜಪೇಟೆ ತಾಲೂಕು ಅಮ್ಮತ್ತಿ ಹೋಬಳಿ ಕಾರ್ಮಾಡು ಗ್ರಾಮದ ನಿವಾಸಿಯಾದ ಸಾರಮ್ಮ ಅವರ ವಾಸದ ಮನೆಗೆ ಬೆಳಗ್ಗೆ ವಿಪರೀತ ಗಾಳಿ ಮಳೆಯಿಂದ ಮನೆಯ ಮೇಲೆ ಮರ ಬಿದ್ದು ತೀವ್ರತರವಾದ ಹಾನಿಯಾಗಿರುತ್ತದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿದರು.ಪ್ರತಿ ವರ್ಷ ಮಳೆಗಾಲದಲ್ಲಿ ನದಿ ದಡದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವ ಸಂಧರ್ಭ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸುವ ಬದಲು ತಾತ್ಕಾಲಿಕವಾಗಿ ನಿರ್ದಿಷ್ಟ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ತಾತ್ಕಾಲಿಕ ಆಶ್ರಯ ನೀಡುತ್ತಾರೆ. ನಂತರ ಆ ಸಮಸ್ಯೆ ಬಗ್ಗೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಈಗಾಗಲೇ ಅಭ್ಯತ್ ಮಂಗಲ ಗ್ರಾಮದಲ್ಲಿ ಸಂತ್ರಸ್ತರಿಗೆ ಸ್ಥಳ ಗುರುತಿಸಿ ಹಂಚಿಕೆ ಮಾಡದೇ ಮೀನಾ ಮೇಷ ಏಣಿಸುತಿದೆ. ಕೂಡಲೇ ಸರ್ಕಾರ ಗಮನ ಹರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು.। ಎಚ್ . ಬಿ ರಮೇಶ್. ಜಿಲ್ಲಾ ಕಾರ್ಯದರ್ಶಿ. ಸಿಪಿಐಎಂ ಕೊಡಗು