ಪ್ರಸಕ್ತ ವರ್ಷ ಕಣ್ತೆರೆಯಲಿದ್ದಾನೆ ಮಳೆರಾಯ!

| Published : Apr 13 2024, 01:00 AM IST

ಸಾರಾಂಶ

ಗುಳೇದಗುಡ್ಡ: ರಾಜ ಬಲಿಷ್ಠನಾಗಿದ್ದಾನೆ. ಹೀಗಾಗಿ ಈ ಬಾರಿಯೂ ರಾಜನೇ ರಾಜನಾಗುವ ಯೋಗವಿದೆ. ರಾಜ, ಪ್ರಜೆಗಳು, ಮಂತ್ರಿ, ಸೈನ್ಯ ಬಲಿಷ್ಠವಾಗಿದೆ. ಈ ದೇಶದಲ್ಲಿ ಸದ್ಯ ಯಾವ ರಾಜನಿದ್ದಾನೋ ಅವನೇ ಮುಂದುವರೆಯುತ್ತಾನೆ ಎಂದು ಮಲ್ಲಿಕಾರ್ಜುನ ಗೊಬ್ಬಿ ಯುಗಾದಿ ಫಲ ಭವಿಷ್ಯ ನುಡಿದಿದ್ದಾರೆ.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ರಾಜ ಬಲಿಷ್ಠನಾಗಿದ್ದಾನೆ. ಹೀಗಾಗಿ ಈ ಬಾರಿಯೂ ರಾಜನೇ ರಾಜನಾಗುವ ಯೋಗವಿದೆ. ರಾಜ, ಪ್ರಜೆಗಳು, ಮಂತ್ರಿ, ಸೈನ್ಯ ಬಲಿಷ್ಠವಾಗಿದೆ. ಈ ದೇಶದಲ್ಲಿ ಸದ್ಯ ಯಾವ ರಾಜನಿದ್ದಾನೋ ಅವನೇ ಮುಂದುವರೆಯುತ್ತಾನೆ ಎಂದು ಮಲ್ಲಿಕಾರ್ಜುನ ಗೊಬ್ಬಿ ಯುಗಾದಿ ಫಲ ಭವಿಷ್ಯ ನುಡಿದಿದ್ದಾರೆ.

ಪಟ್ಟಣದ ಮಾರವಾಡಿ ಬಗೀಚಿನಲ್ಲಿ ಇಲ್ಯಾಳ ಮ್ಯಾಳದವರು ಪ್ರತಿವರ್ಷ ಯುಗಾದಿ ಹಬ್ಬದ ನಿಮಿತ್ತ ಫಲ ಭವಿಷ್ಯ ನುಡಿಯುತ್ತಾರೆ. ಈ ಬಾರಿ ನುಡಿದ ಭವಿಷ್ಯ, ಪ್ರಸಕ್ತವಾಗಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೇಲೆ ಕೇಂದ್ರೀಕೃತವಾಗಿದೆ.ಈ ವರ್ಷ ಹೆಸರು, ಬಿಳಿಜೋಳ, ಕಡಲೆ, ಗೋದಿ ಬಂಪರ್ ಬೆಳೆ ಇದೆ. ತೊಗರಿ, ಸಜ್ಜೆಗೆ ಕೀಟ ಬಾಧೆ ಕಾಡಲಿದೆ. ಅಲ್ಲದೇ ಎಳ್ಳು ಅತ್ಯುತ್ತಮವಾಗಿ ಬೆಳೆಯಲಿದೆ. ಗುಳೇದಗುಡ್ಡ ಖಣ, ಇಳಕಲ್ ಸೀರೆಯ ವ್ಯಾಪಾರ ವಹಿವಾಟು ಕುಂಠಿತ ಕಾಣಲಿದೆ. ಬಟ್ಟೆ ವ್ಯಾಪಾರದಲ್ಲಿ ಈ ಬಾರಿ ಗಣನೀಯ ಏರಿಕೆಯಾಗಲಿದೆ. ಸಿಮೆಂಟ್, ಕಬ್ಬಿಣ, ಉಸುಕು ವ್ಯಾಪಾರ ಜೋರಾಗಲಿದೆ ಎಂದು ಹೇಳಿದರು.

ಆರಿದ್ರಾ, ಪುನರ್ವಸು, ಮಾಘ, ಹುಬ್ಬಾ, ಚಿತ್ತಿ ಮಳೆಗಳು ಸಂಪೂರ್ಣವಾಗಿ ಆಗಲಿವೆ. ರಾಜ್ಯ ಮತ್ತು ದೇಶದಲ್ಲಿ ಈ ಬಾರಿ ಮಳೆರಾಯ ಕಣ್ತೆರೆಯಲಿದ್ದಾನೆ. ಜನರಿಗೆ ನೀರಿನ ಬವಣೆ ತಪ್ಪಲಿದೆ. ಹಲಸಂದಿ, ನವಣೆ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮವಾಗಿ ಬರಲಿವೆ ಎಂದು ಭವಿಷ್ಯ ನುಡಿಯಲಾಯಿತು.

ಈ ವರ್ಷದ ಯುಗಾದಿ ಫಲ ಭವಿಷ್ಯ ಕೇಳಲು ಸೇರಿದ ಅದೆಷ್ಟೋ ಜನ, ರಾಜನೇ ಮತ್ತೇ ರಾಜನಾಗುತ್ತಾನೆ ಎಂಬ ಭವಿಷ್ಯವಾಣಿ ಕೇಳಿ ಈ ಬಾರಿ ಮತ್ತೆ ಮೋದಿ ಅವರು ಅಧಿಕಾರಕ್ಕೆ ಬರುತ್ತಾರೆನೋ ಎಂಬ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಮ್ಯಾಳದ ಮಲ್ಲಿಕಾರ್ಜುನ ಗೊಬ್ಬಿ, ನಾಗಪ್ಪ ಚಿಂದಿ, ಪ್ರಸಾಂತ ರಂಜಣಗಿ, ಶಂಕರ ರಂಜಣಗಿ, ಮಲ್ಲೆಶಪ್ಪ ಶೀಪ್ರಿ, ಶಿವು ಹುಣಸಿಮರದ, ಈರಣ್ಣ ರಂಜನಗಿ ಸೇರಿದಂತೆ ಸಾರ್ವಜನಿಕರು ಸೇರಿದ್ದರು.

ಹಿನ್ನೆಲೆ: ಫಲ ಭವಿಷ್ಯಕ್ಕೆ ಶತಮಾನದ ಇತಿಹಾಸವಿದೆ. ಇಲ್ಲಿ ಮಳೆ, ಬೆಳೆ, ವ್ಯಾಪಾರ, ವಹಿವಾಟು ಹೀಗೆ ವರ್ಷದ ಭವಿಷ್ಯವನ್ನು ಹೇಳಲಾಗುತ್ತದೆ. ಹಿಂದಿನ ದಿನದ ರಾತ್ರಿಯೇ ಬಗೀಚ್ನಲ್ಲಿ ಸುಮಾರು 20 ಅಡಿ ಚೌರಸ್ ಸ್ಥಳವನ್ನು ಹೇಳಿಕೆಗೆ ಸಿದ್ಧಗೊಳಿಸಿ ಸುತ್ತಲೂ ಜೋಳದ ದಂಟಿನಿಂದ ಬೇಲಿ ಹಾಕಲಾಗುತ್ತದೆ. ಪರಂಪರಾಗತವಾಗಿ ಹೇಳುತ್ತ ಬಂದಿರುವ ಈ ಭವಿಷ್ಯವಾಣಿಯನ್ನು ಕೇಳಲು ನೂರಾರು ಜನ ಬೆಳಿಗ್ಗೆ ಆರು ಗಂಟೆಗೆ ಬಂದು ಜಮಾಯಿಸುತ್ತಾರೆ.

ಸುಮಾರು 20 ಅಡಿ ಚೌರಸ್ ಸ್ಥಳದ ಒಳಗಡೆ ಒಂದು ಕಡೆ ರೈತ ಹೊಲ ಉಳುಮೆ ಮಾಡುವ ಮಣ್ಣಿನ ಮೂರ್ತಿ, ಖಣದ ಬಟ್ಟೆಗಳನ್ನು, ಇತರೆ ಬಣ್ಣ ಬಣ್ಣದ ಬಟ್ಟೆಗಳನ್ನು ಅಲ್ಲಲ್ಲಿ ಹಾಕಲಾಗಿರುತ್ತದೆ. ಮಧ್ಯದಲ್ಲಿ ಮಣ್ಣಿನಿಂದ ಗದ್ದುಗೆ ಮಾಡಿ ಅದರಲ್ಲಿ ದ್ವಿದಳ ಧಾನ್ಯಗಳನ್ನು ಹಿಂದಿನ ದಿನವೇ ರಾತ್ರಿ ಮುಚ್ಚಿಟ್ಟು ಅದರ ಹತ್ತಿರ ಎಕ್ಕಿ ಎಲೆಗಳನ್ನು ಇಟ್ಟಿರುತ್ತಾರೆ. ಮರುದಿನ ಬೆಳಿಗ್ಗೆ ಇವುಗಳ ಲಕ್ಷಣ ನೋಡಿ ಭವಿಷ್ಯ ಹೇಳುವುದು ಒಂದು ವಾಡಿಕೆ. ಬೆಳಗಿನಜಾವ ಈ ಸ್ಥಳದಲ್ಲಿ ರತ್ನಪಕ್ಷಿ ಕಂಡ ನಂತರವೇ ಭವಿಷ್ಯ ಹೇಳುವುದು ಒಂದು ವಿಶೇಷ. ಕಳೆದ ವರ್ಷ ಮಳೆ-ಬೆಳೆ ಕುರಿತು ನುಡಿದ ಭವಿಷ್ಯ ಸತ್ಯವಾಗಿತ್ತು.