ಕಳೆದ ಏ.26ರಂದು ಸುರಿದ ಭಾರೀ ಗಾಳಿ ಸಹಿತ ಆಲಿಕಲ್ಲು ಮಳೆಯಿಂದ ತಮ್ಮ ಜೀವನಾಧಾರವಾಗಿದ್ದ ಅಡಕೆ ತೋಟವನ್ನು ಕಳೆದುಕೊಂಡ ರೈತರಿಗೆ ಸಿಗಬೇಕಾದ ಪರಿಹಾರ ಇನ್ನೂ ಮರೀಚಿಕೆಯಾಗಿದೆ.

ಅರಹತೊಳಲು ಕೆ.ರಂಗನಾಥ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಕಳೆದ ಏ.26ರಂದು ಸುರಿದ ಭಾರೀ ಗಾಳಿ ಸಹಿತ ಆಲಿಕಲ್ಲು ಮಳೆಯಿಂದ ತಮ್ಮ ಜೀವನಾಧಾರವಾಗಿದ್ದ ಅಡಕೆ ತೋಟವನ್ನು ಕಳೆದುಕೊಂಡ ರೈತರಿಗೆ ಸಿಗಬೇಕಾದ ಪರಿಹಾರ ಇನ್ನೂ ಮರೀಚಿಕೆಯಾಗಿದೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಗಾಳಿ ಮಳೆಯಿಂದ ಆದ ಅನಾಹುತ ಹೊಳೆಹೊನ್ನೂರು ಮತ್ತು ಆನವೇರಿ ಭಾಗದ ಅಡಕೆ ಬೆಳೆಗಾರರ ಬದುಕನ್ನೇ ಬರಡು ಮಾಡಿದೆ. ಸುಮಾರು ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಲಕ್ಷಾಂತರ ಅಡಕೆ ಮತ್ತು ತೆಂಗಿನ ಮರಗಳು ನೆಲಕ್ಕುರುಳಿದವು. ಇನ್ನೇನು ನಮ್ಮ ಜೀವನವೇ ಕಳೆದುಹೋಯಿತು ಅಂದುಕೊಂಡಿದ್ದ ರೈತರಿಗೆ ಸರ್ಕಾರದ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಾಂತ್ವನ ಹೇಳಿ ಸೂಕ್ತ ಪರಿಹಾರದ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವ ಪರಿಹಾರವೂ ದೊರೆತಿಲ್ಲ. ಜೊತೆಗೆ ಪರಿಹಾರದ ಪ್ರಮಾಣವೂ ತಿಳಿಯದೆ ರೈತರು ಗೊಂದಲದಲ್ಲಿದ್ದಾರೆ.

ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌) ನಿಯಮಾವಳಿಗಳ ಪ್ರಕಾರ ಅಡಕೆ ಮರಗಳಿಗೆ ಪ್ರತ್ಯೇಕ ಮರ ಎಂದು ಪರಿಹಾರ ಇರುವುದಿಲ್ಲ. ಬದಲಿಗೆ ಅಡಕೆಯನ್ನು ‘ದೀರ್ಘಾವಧಿ ಬೆಳೆ/ತೋಟಗಾರಿಕೆ ಬೆಳೆ’ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಒಂದು ಹೆಕ್ಟೇರ್‌ಗೆ 31 ಸಾವಿರ ರು. ವರೆಗೆ ಪರಿಹಾರ ನೀಡಲಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ 22500 ರು., ರಾಜ್ಯ ಸರ್ಕಾರದ 8500 ರು. ಸಹಾಯಧನ ಸೇರಿರುತ್ತದೆ.

ಪರಿಹಾರದ ವಿವರಗಳು:

1.ಈ ಪರಿಹಾರವು ಒಬ್ಬ ರೈತನಿಗೆ ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಸೀಮಿತವಾಗಿರುತ್ತದೆ.

2.ಬೆಳೆ ಅಥವಾ ಮರಗಳು ಶೇ.33 ಅಥವಾ ಅದಕ್ಕಿಂತ ಹೆಚ್ಚು ಹಾನಿಯಾಗಿದ್ದರೆ ಮಾತ್ರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ.

3.ಮಳೆಯಿಂದ ಉಂಟಾಗುವ ಕೊಳೆರೋಗ ಅಥವಾ ಗಾಳಿ ಮಳೆಯಿಂದ ಮರಬಿದ್ದು ನಷ್ಟವಾಗಿದ್ದರೆ ಈ ಪರಿಹಾರ ಅನ್ವಯಿಸುತ್ತದೆ.

ಈ ಮಾರ್ಗಸೂಚಿಯ ಪ್ರಕಾರ ಒಂದು ಅಡಕೆ ಮರಕ್ಕೆ 124 ರು. ಈ ಮೊತ್ತದಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲ. ಏಕೆಂದರೆ ಈಗಾಗಲೇ ಮುರಿದು ಬಿದ್ದಿರುವ ಮರಗಳನ್ನು ಕತ್ತರಿಸಿ ತೆಗೆಯಲು ಒಂದು ಅಡಕೆ ಮರಕ್ಕೆ 50 ರು., ತೆಂಗಿನ ಮರಕ್ಕೆ 300 ರು., ಇತರೆ ಮರಗಳಿಗೆ ಇನ್ನೂ ಹೆಚ್ಚಿನ ಮೊತ್ತದ ಹಣವನ್ನು ನೀಡಬೇಕಾದ ಅನಿವಾರ್ಯತೆ ಇದೆ. ಹೊಸದಾಗಿ ಸಸಿಗಳನ್ನು ಹಾಕಬೇಕು ಅಂದರೆ ಅವುಗಳ ಬೆಲೆ ಕೂಡ 80 ರು. ಆಗಿದೆ.

ರೈತರಿಗೆ ಆರ್ಥಿಕ ಹೊರೆ:

ಫಸಲಿಗೆ ಬಂದಿದ್ದ ಅಡಕೆ ತೋಟವನ್ನು ಕಳೆದುಕೊಂಡಿರುವ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರ ಜತೆಗೆ ಗಾಯದ ಮೇಲೆ ಉಪ್ಪು ಸುರಿದಂತೆ ಮುರಿದು ಬಿದ್ದಿರುವ ಮರಗಳನ್ನು ಕತ್ತರಿಸಿ ತೆರವು ಮಾಡಲು, ಮರದ ಬುಡಗಳನ್ನು (ಬಡ್ಡೆ) ಬೇರುಸಹಿತ ಕಿತ್ತು ಹೊರ ತೆಗೆಯಲು, ನಂತರ ಇದರಿಂದ ಉಂಟಾಗುವ ಗುಂಡಿಗಳನ್ನು ಮುಚ್ಚಲು ಮಣ್ಣು ಮತ್ತು ಹೊಸ ಸಸಿಗಳು ಸೇರಿದಂತೆ ಸಂಪೂರ್ಣ ತೋಟವನ್ನು ಮರು ನಿರ್ಮಾಣ ಮಾಡಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ.

ನೂರಾರು ಮರ ಕತ್ತರಿಸುವ ಮಿಷಿನ್ ಖರೀದಿ:

ಕೆಲವು ದೊಡ್ಡ ರೈತರು ತಮ್ಮ ತೋಟಗಳಲ್ಲಿ ಬಿದ್ದಿರುವ ಸಾವಿರಾರು ಮರಗಳನ್ನು ಕತ್ತರಿಸಲು ಬೇರೆಯವರಿಗೆ ಒಂದು ಮರಕ್ಕೆ 50 ರು. ನೀಡುವ ಬದಲು ತಾವೇ ಸ್ವತಃ ಒಂದೊಂದು ಮರ ಕತ್ತರಿಸುವ ಮಿಷಿನ್‌ಗಳನ್ನು ಖರೀದಿಸಿದ್ದಾರೆ. ಇನ್ನೂ ಕೆವು ಕಾರ್ಮಿಕರು ಹೊಸ ಮಿಷಿನ್ ತೆಗೆದುಕೊಂಡು ದಿನವೊಂದಕ್ಕೆ ಸಾವಿರಾರು ರುಪಾಯಿಗಳನ್ನು ದುಡಿಯುತ್ತಿದ್ದಾರೆ.

ದುಡಿಯುವ ಮಗನಂತಿದ್ದ ಫಸಲಿಗೆ ಬಂದಿದ್ದ ಅಡಕೆ ತೋಟಗಳನ್ನು ಕಳೆದುಕೊಂಡಿರುವ ರೈತರಿಗೆ ಸರ್ಕಾರದ ನೆರವಿನ ಅಗತ್ಯವಿದೆ. ಆದರೆ ಸುಮಾರು 50 ವರ್ಷಗಳ ಹಿಂದಿನ ನಿಯಮಗಳನ್ನು ಮರು ಪರಿಶೀಲಿಸಬೇಕು. ಪ್ರಸ್ತುತ ಆಗಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ವೈಜ್ಞಾನಿಕವಾದ ಪರಿಹಾರ ನೀಡಬೇಕು.

ಎಂ.ಪಾಲಾಕ್ಷಪ್ಪ ರೈತ, ಯಡೇಹಳ್ಳಿ.

ಈಗಾಗಲೇ ಸಾವಿರಾರು ಅಡಕೆ, ತೆಂಗಿನ ಮರಗಳನ್ನು ಕತ್ತರಿಸಲಾಗಿದೆ. ಇನ್ನೂ ಕೂಡ ಬಹಾಳ ಮರಗಳನ್ನು ಕತ್ತರಿಸುವುದು ಬಾಕಿ ಇದೆ. ನನ್ನ ಹಾಗೆಯೇ ಬಹಳಷ್ಟು ಜನರು ಹೊಸ ಮರ ಕತ್ತರಿಸುವ ಯಂತ್ರವನ್ನು ತಂದಿದ್ದಾರೆ. ಒಂದೊಂದು ಗ್ರಾಮದಲ್ಲಿ 15 ರಿಂದ 20 ಹೊಸ ಯಂತ್ರ ತಂದಿದ್ದಾರೆ.

ಚೌಡಪ್ಪ ಕಾರ್ಮಿಕ, ಚಂದನಕೆರೆ.