ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಾಧಾರಣ ಮಳೆ ಸುರಿದಿದ್ದು, ವಾತಾವರಣ ತಂಪಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಆಗಾಗ ಸುರಿದ ಮಳೆಯಿಂದ ನಗರದಲ್ಲಿ ಜನಜೀವನ ಸಹಜವಾಗಿದ್ದರೂ, ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ-ವಹಿವಾಟು ಮಂದಗತಿಯಲ್ಲಿ ಸಾಗಿತು.

ಬೈಲಹೊಂಗಲ ಹಾಗೂ ಸವದತ್ತಿ ಭಾಗಗಳಲ್ಲೂ ಮಳೆಯಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಮಂಗಳವಾರ 11,610 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಸೋಮವಾರ ಇದು 10,810 ಕ್ಯುಸೆಕ್ ಇತ್ತು. ಇನ್ನೊಂದೆಡೆ, ಮಲಪ್ರಭಾ ನದಿಪಾತ್ರದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿರುವುದರಿಂದ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಒಳಹರಿವು ಇಳಿಕೆಯಾಗಿದೆ. ಮಂಗಳವಾರ 2,331 ಕ್ಯುಸೆಕ್ ನೀರು ಹರಿದು ಬಂದಿದ್ದು, ಸೋಮವಾರ 4,117 ಕ್ಯುಸೆಕ್ ಒಳಹರಿವು ದಾಖಲಾಗಿದೆ.

ಚಿಕ್ಕೋಡಿ ಭಾಗದ ಸೇತುವೆಗಳು ಮುಳುಗಡೆ:

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮತ್ತೆ ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಪರಿಣಾಮ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಆರು ಸೇತುವೆಗಳು ಮಂಗಳವಾರ ಜಲಾವೃತಗೊಂಡಿವೆ.


ಯಡೂರ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರ-ಕಲ್ಲೋಳ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಿಪ್ಪಾಣಿ ತಾಲೂಕಿನ ಭೋಜ-ಕಾರದಗಾ, ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಹುನ್ನರಗಿ-ಮಮದಾಪುರ, ಬಾರವಾಡ-ಕುನ್ನೂರ ಸೇತುವೆಗಳು ಜಲಾವೃತಗೊಂಡಿದ್ದು, ತಾತ್ಕಾಲಿಕ ಅಡಚಣೆ ಉಂಟಾಗಿದೆ.

ಈ 15 ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ಒಂಬತ್ತು ಸೇತುವೆಗಳು ಮುಳುಗಡೆಯಾಗಿದ್ದವು. ಬಳಿಕ ನೀರಿನ ಮಟ್ಟ ಇಳಿದ ಕಾರಣ ಸಂಚಾರ ಪುನರಾರಂಭವಾಗಿತ್ತು. ಇದೀಗ ಮುಂಗಾರು ಹಂಗಾಮಿನಲ್ಲಿ ಎರಡನೇ ಬಾರಿಗೆ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳ ಅಡ್ಡಲಾಗಿರುವ ಸೇತುವೆಗಳು ಜಲಾವೃತಗೊಂಡಿವೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಯಲ್ಲಿ 64,468 ಕ್ಯುಸೆಕ್ ನೀರು ಹರಿಯುತ್ತಿದ್ದು, ಕೃಷ್ಣಾ ಹಾಗೂ ಉಪನದಿಗಳ ನೀರಿನ ಮಟ್ಟ ನಾಲ್ಕರಿಂದ ಐದು ಅಡಿ ಏರಿಕೆಯಾಗಿದೆ. ನದಿ ತೀರದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.