ಮಳೆ ಕೊರತೆ: ಒಣಗಿದ 10 ಎಕರೆ ಹೆಸರು ಬೆಳೆ ಹರಗಿದ ರೈತರು

| Published : Jul 11 2025, 11:48 PM IST

ಸಾರಾಂಶ

ಕುಕನೂರು ತಾಲೂಕಿನ ದ್ಯಾಂಪೂರು ಗ್ರಾಮದ ರೈತ ದೇವಪ್ಪ ಮರಡಿ ಹತ್ತು ಎಕರೆ ಜಮೀನಿನಲ್ಲಿ ಬಿತ್ತಿದ ಬೆಳೆಯನ್ನು ಹರಗಿದ್ದಾರೆ. ಬಿತ್ತನೆ ಮಾಡಿ ತಿಂಗಳು ಕಳೆದರೂ ತೇವಾಂಶ ಕೊರತೆಯಿಂದ ಬೆಳೆ ನೆಲೆಬಿಟ್ಟು ಮೇಲೆದ್ದಿಲ್ಲ. ಅಲ್ಲದೆ ಅಲ್ಪಾವಧಿ ಬೆಳೆಯಾದ ಹೆಸರು ಬೆಳೆ ಮೂರು ತಿಂಗಳಲ್ಲಿ ಬೆಳೆ ಬಂದು ಬಿಡುತ್ತದೆ.

ಕುಕನೂರು:

ಕಳೆದ ಒಂದು ತಿಂಗಳಿಂದ ಮಳೆಯಾಗದ ಪರಿಣಾಮ ತಾಲೂಕಿನ ದ್ಯಾಂಪುರ, ಕೋಮಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿತ್ತಿದ ಬೆಳೆಗಳು ಒಣಗಿದ್ದು, ರೈತರು ಬೆಳೆ ಹರಗಲು (ನಾಶ) ಮುಂದಾಗಿದ್ದಾರೆ.

ತಾಲೂಕಿನ ದ್ಯಾಂಪೂರು ಗ್ರಾಮದ ರೈತ ದೇವಪ್ಪ ಮರಡಿ ಹತ್ತು ಎಕರೆ ಜಮೀನಿನಲ್ಲಿ ಬಿತ್ತಿದ ಬೆಳೆಯನ್ನು ಹರಗಿದ್ದಾರೆ. ಬಿತ್ತನೆ ಮಾಡಿ ತಿಂಗಳು ಕಳೆದರೂ ತೇವಾಂಶ ಕೊರತೆಯಿಂದ ಬೆಳೆ ನೆಲೆಬಿಟ್ಟು ಮೇಲೆದ್ದಿಲ್ಲ. ಅಲ್ಲದೆ ಅಲ್ಪಾವಧಿ ಬೆಳೆಯಾದ ಹೆಸರು ಬೆಳೆ ಮೂರು ತಿಂಗಳಲ್ಲಿ ಬೆಳೆ ಬಂದು ಬಿಡುತ್ತದೆ. ಒಂದು ತಿಂಗಳಾದರೂ ಸಹ ಮಳೆ ಬಾರದೆ ಬೆಳೆ ನೆಲಕ್ಕಚ್ಚಿದೆ. ಇದರಿಂದ ಅಲ್ಪಾವಧಿ ಬೆಳೆ ಮುಂದಿನ ದಿನಗಳಲ್ಲಿ ಇಳುವರಿ ಸಹ ಕೊಡದೆಂದು ರೈತರು ಬೆಳೆ ಹರಗಲು ಮುಂದಾಗಿದ್ದಾರೆ.

ಕುಕನೂರು, ಯಲಬುರ್ಗಾ ತಾಲೂಕಿನ ಬಹುತೇಕ ಕಡೆ ಮಳೆಯಾಗದೆ ಬೆಳೆ ಹರಗುತ್ತಿದ್ದು ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಿ ರಾಜ್ಯ ಸರ್ಕಾರಕ್ಕೆ ಬರಗಾಲದ ಸ್ಥಿತಿ ವಿವರಿಸಿ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ರೈತರು ಆಗ್ರಹಿಸಿದೆ.