ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳವಾರವೂ ಮಳೆ ವಾತಾವರಣ ಮುಂದುವರಿದಿದೆ.
ಮಂಗಳೂರು/ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳವಾರವೂ ಮಳೆ ವಾತಾವರಣ ಮುಂದುವರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದೆ. ಗ್ರಾಮಿಣ ಬಾಗದಲ್ಲಿ ಬೆಳಗಿನ ಜಾವದಿಂದಲೇ ಆರಂಭವಾದ ಮಳೆ, ಸಂಜೆಯ ವೇಳೆಗೆ ಬಿರುಸು ಪಡೆದುಕೊಂಡಿತು. ಕರಾವಳಿ ತೀರಪ್ರದೇಶದಲ್ಲಿ ಸಂಜೆ ವೇಳೆ ಮಳೆ ಬಿರುಸು ಪಡೆದಿದೆ.ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಕುಂದಾಪುರ ಮತ್ತು ಹೆಬ್ರಿ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಕರಾವಳಿಯಲ್ಲಿ ಬುಧವಾರವೂ ಭಾರಿ ಗಾಳಿ ಮತ್ತು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ನಿರಂತರ ಮಳೆಗೆ ಮಂಗಳೂರು ಸಮೀಪದ ವಾಮಂಜೂರಿನ ಕೆತ್ತಿಕಲ್ ಹೆದ್ದಾರಿ ಬದಿಯಲ್ಲಿ ಬಾರೀ ಪ್ರಮಾಣದಲ್ಲಿ ಮಣ್ಣು ಕುಸಿತಗೊಂಡಿದೆ. ಒಂದು ಬದಿಯ ಹೆದ್ದಾರಿ ಸಂಪೂರ್ಣ ಮಣ್ಣು ತುಂಬಿ ಬಂದ್ ಆಗಿದೆ. ಆ ಭಾಗದಲ್ಲಿ ಅದಕ್ಕೂ ಮೊದಲೇ ಸಂಚಾರ ನಿರ್ಬಂಧಿಸಲಾಗಿದೆ. ಬಾರೀ ಮಳೆ ಮುಂದುವರಿದಲ್ಲಿ ಮತ್ತೆ ಮಣ್ಣು ಕುಸಿತ ಭೀತಿ ಈ ಪ್ರದೇಶದಲ್ಲಿದೆ.ಬಂಟ್ವಾಳ ತಾಲೂಕಿನಾದ್ಯಂತ ಮಳೆಯ ಅಬ್ಬರ ಆಗಾಗ್ಗೆ ಸುರಿಯುತ್ತಿದ್ದು, ಮಂಗಳವಾರ ಮಧ್ಯಾಹ್ನ ದ ಬಳಿಕ ಮಳೆಯ ಆರ್ಭಟ ಹೆಚ್ಚಾಗಿತ್ತು. ತಾಲೂಕಿನಲ್ಲಿ ನೇತ್ರಾವತಿ ನದಿ ೪.೧ ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ನದಿ ತಟದಲ್ಲಿ ನೆರೆಭೀತಿ ಹಾಗೆಯೇ ಇದೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಹಲವೆಡೆಗಳಲ್ಲಿ ಗುಡ್ಡ ಕುಸಿತದ ಪ್ರಕರಣಗಳು ವರದಿಯಾಗಿದ್ದರೂ, ಅದೃಷ್ಟವಶಾತ್ ಯಾವುದೇ ಅಪಾಯಗಳು ಸಂಭವಿಸಿಲ್ಲ.
ದ.ಕ. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆವರೆಗೆ 24 ಗಂಟೆ ಅವಧಿಯಲ್ಲಿ 57.4 ಮಿ.ಮೀ. ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 42.3 ಮಿ.ಮೀ., ಬಂಟ್ವಾಳದಲ್ಲಿ 73.7 ಮಿ.ಮೀ., ಮಂಗಳೂರಿನಲ್ಲಿ 84.6 ಮಿ.ಮೀ., ಪುತ್ತೂರಿನಲ್ಲಿ 60 ಮಿ.ಮೀ., ಸುಳ್ಯದಲ್ಲಿ 53.9 ಮಿ.ಮೀ., ಮೂಡುಬಿದಿರೆಯಲ್ಲಿ 87 ಮಿ.ಮೀ., ಕಡಬದಲ್ಲಿ 46.1 ಮಿ.ಮೀ., ಮೂಲ್ಕಿಯಲ್ಲಿ 32.6 ಮಿ.ಮೀ., ಉಳ್ಳಾಲದಲ್ಲಿ 88.8 ಮಿ.ಮೀ. ಮಳೆಯಾಗಿದೆ. ಮಳೆಗೆ 1 ಮನೆ ಸಂಪೂರ್ಣ ಹಾನಿಯಾಗಿದೆ.ಉಡುಪಿ ವರದಿ: ಮಂಗಳವಾರ ವಿಪರೀತ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಉಡುಪಿ ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಿದ್ದರು. ಆದರೆ ಮಂಗಳವಾರ ಹಗಲಿನಲ್ಲಿ ಆತಂಕವಿದ್ದಷ್ಟು ಮಳೆಯಾಗಿಲ್ಲ.
ಆದರೆ ಸೋಮವಾರ ರಾತ್ರಿ ಇಡೀ ಬಿಡದೆ ಮಳೆಯಾಗಿದ್ದು, ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಶ್ರೀನಿವಾಸ್ ಅವರ ಮನೆಗೆ ಭಾರಿ ಗಾಳಿ ಮಳೆಯಂದ ಹಾನಿಯಾಗಿದ್ದು, ಅವರಿಗೆ ಸುಮಾರು 80,000 ರು.ಗಳಷ್ಟು ನಷ್ಟ ಸಂಭವಿಸಿದೆ.ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಈ ಬಾರಿಯ ಮಳೆಗಾಲದ ಅತಿ ಹೆಚ್ಚು 104.40 ಮಿ.ಮೀ. ಮಳೆ ದಾಖಲಾಗಿದೆ. ತಾಲೂಕುವಾರು ಕಾರ್ಕಳದಲ್ಲಿ 97.70, ಕುಂದಾಪುರದಲ್ಲಿ 135.60, ಉಡುಪಿಯಲ್ಲಿ 82.30, ಬೈಂದೂರುನಲ್ಲಿ 97, ಬ್ರಹ್ಮಾವರದಲ್ಲಿ 76.60, ಕಾಪುನಲ್ಲಿ 57.20 ಮತ್ತು ಹೆಬ್ರಿಯಲ್ಲಿ 126.20 ಮಿ.ಮೀ. ಮಳೆಯಾಗಿದೆ.