ಶಾಲೆಗೆ ಮಳೆ ನೀರು: ತಿರ್ಲಾಪುರಕ್ಕೆ ಬಿಇಒ ಭೇಟಿ

| Published : Oct 22 2024, 12:05 AM IST / Updated: Oct 22 2024, 12:06 AM IST

ಸಾರಾಂಶ

ಶಾಲೆಗೆ ಮಳೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಶಾಲಾ ಆವರಣ ಹಾಗೂ ಕೊಠಡಿಗಳೆಲ್ಲ ಕೆಸರುಗದ್ದೆಯಂತಾಗಿತ್ತು. ಈ ಕುರಿತು ಸೋಮವಾರ "ಕನ್ನಡಪ್ರಭ "ದಲ್ಲಿ ವರದಿ ಪ್ರಕಟಿಸುತ್ತಿದ್ದಂತೆ ಬೆಳಗ್ಗೆ ಬಿಇಒ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಹುಬ್ಬಳ್ಳಿ:

ಮಳೆಯಿಂದಾಗಿ ಜಲಾವೃತವಾಗಿದ್ದ ನವಲಗುಂದ ತಾಲೂಕಿನ ತಿರ್ಲಾಪುರದ ಕನ್ನಡ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಗೆ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಬಿ. ಮಲ್ಲಾಡದ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಶಾಲೆಗೆ ಮಳೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಶಾಲಾ ಆವರಣ ಹಾಗೂ ಕೊಠಡಿಗಳೆಲ್ಲ ಕೆಸರುಗದ್ದೆಯಂತಾಗಿತ್ತು. ಈ ಕುರಿತು ಸೋಮವಾರ "ಕನ್ನಡಪ್ರಭ "ದಲ್ಲಿ ವರದಿ ಪ್ರಕಟಿಸುತ್ತಿದ್ದಂತೆ ಬೆಳಗ್ಗೆ ಬಿಇಒ ಶಾಲೆಗೆ ಭೇಟಿ ನೀಡಿ ಗ್ರಾಪಂ ಅಧ್ಯಕ್ಷರು, ಪಿಡಿಒ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಬೇಕಾದ ರೂಪರೇಷೆ ಕುರಿತು ಚರ್ಚಿಸಿದರು.

ಶಾಲೆ ತೆಗ್ಗು ಪ್ರದೇಶದಲ್ಲಿ ಇರುವುದು ಹಾಗೂ ಸುತ್ತಲೂ ತಡೆಗೋಡೆ ಇರದ ಹಿನ್ನೆಲೆ ಮಳೆ ನೀರು ನುಗ್ಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು. ಆಗ ಬಿಇಒ, ಒಟ್ಟು 11 ಕೊಠಡಿ ಇದ್ದು 5 ಕೊಠಡಿಗೆ ಹಾಗೂ ಶಾಲಾವರಣಕ್ಕೆ ಮಳೆ ನೀರು ನುಗ್ಗಿದೆ. ಉಳಿದ ಕೊಠಡಿಯಲ್ಲಿ ತರಗತಿ ನಡೆಸಲು ಶಿಕ್ಷಕರಿಗೆ ಸೂಚಿಸಿದರು. ಸ್ವತಃ ತಾವೇ ನಿಂತು ಶಾಲಾ ಆವರಣ ಮತ್ತು ಕೊಠಡಿಗಳಲ್ಲಿದ್ದ ಕೆಸರನ್ನು ಬಿಇಒ ತೆರವುಗೊಳಿಸಿದರು.ಮಾಹಿತಿ ಬರುತ್ತಿದ್ದಂತೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು ಎಂದು ನವಲಗುಂದ ಬಿಇಒ ಎಸ್‌.ಬಿ. ಮಲ್ಲಾಡದ ಹೇಳಿದರು.