ಸಾರಾಂಶ
ಈ ವರ್ಷ ಉಳಿದ ಅಡಕೆ ಕೃಷಿಗೂ ನೀರು ತುಂಬಿದ್ದು, ಗಿಡಗಳು ನಾಶವಾಗುವ ಭೀತಿ ಎದುರಾಗಿದೆ. ತಾಲೂಕು ಆಡಳಿತ, ಜಿಲ್ಲಾಡಳಿತ ಕೃಷಿಕರ ಅಳಲಿಗೆ ಕಿವಿಯಾಗಬೇಕಿದೆ.
ಕನ್ನಡಪ್ರಭ ವಾರ್ತೆ ಬಂಟ್ವಾಳ
ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ವೇಳೆ ಕಂಪನಿಯವರ ನಿರ್ಲಕ್ಷ್ಯಕ್ಕೆ ಮಹಿಳೆಯೊಬ್ಬರ ಅಡಕೆ ತೋಟಕ್ಕೆ ನೀರು ನುಗ್ಗಿದ್ದು ಕೃಷಿ ನಾಶವಾಗುವ ಆತಂಕ ಉಂಟಾಗಿದೆ. ಕೃಷಿಯನ್ನು ಉಳಿಸಿಕೊಡಿ ಎಂದು ಕಂಪನಿಯವರ ಬಳಿ ಮಹಿಳೆ ಅಂಗಲಾಚಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ದೊರ್ಮೆ ಎಂಬಲ್ಲಿ ನಡೆದಿದೆ.ಇಲ್ಲಿನ ನಿವಾಸಿ ಚಂದ್ರಾವತಿ ಅವರ ಅಡಕೆ ತೋಟದಲ್ಲಿ ಕೆಸರು ನೀರು ನಿಂತಿದ್ದು, ಲಕ್ಷಾಂತರ ರುಪಾಯಿ ಫಸಲು ನೀಡುವ ಅಡಕೆ ಗಿಡಗಳು ನಾಶವಾಗುವ ಲಕ್ಷಣಗಳು ಕಂಡು ಬಂದಿವೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚರಂಡಿ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೆ ಅಡಕೆ ತೋಟದಲ್ಲಿ ನೀರು ತಂಬಿದೆ.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಸಂದರ್ಭದಲ್ಲಿ ಕೃಷಿಕರು ಭೂಮಿ ಕಳೆದುಕೊಂಡಿದ್ದಾರೆ. ಇವರ ಸ್ವಂತ ಕೃಷಿ ಜಮೀನಿನ ಮೂಲಕ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಇದೀಗ ರಸ್ತೆ ನಿರ್ಮಾಣ ಮಾಡಿ ಬಾಕಿ ಉಳಿದ ಜಾಗದಲ್ಲಿ ಉಳಿದಿರುವ ಅಡಕೆ ಕೃಷಿಯಲ್ಲಿ ನೀರು ತುಂಬಿಕೊಂಡಿದೆ. ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ನೀರು ಇವರ ಜಮೀನಿಗೆ ಬರದಂತೆ ತಡೆಗೋಡೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಇವರದ್ದಾಗಿದೆ.ಇದೇ ರೀತಿ ಕಳೆದ ವರ್ಷ ನೀರು ತುಂಬಿ ಲಕ್ಷಾಂತರ ಮೌಲ್ಯದ ಅಡಿಕೆ ಗಿಡಗಳು ಸತ್ತುಹೋಗಿವೆ. ಈ ಬಗ್ಗೆ ಅನೇಕ ಬಾರಿ ಕಂಪನಿಯ ಬಳಿಗೆ ಹೋಗಿ ದೂರು ನೀಡಿದೆಯಾದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದೀಗ ಈ ವರ್ಷ ಉಳಿದ ಅಡಕೆ ಕೃಷಿಗೂ ನೀರು ತುಂಬಿದ್ದು, ಗಿಡಗಳು ನಾಶವಾಗುವ ಭೀತಿ ಎದುರಾಗಿದೆ. ತಾಲೂಕು ಆಡಳಿತ, ಜಿಲ್ಲಾಡಳಿತ ಕೃಷಿಕರ ಅಳಲಿಗೆ ಕಿವಿಯಾಗಬೇಕಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))