ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಹವಾಮಾನ ವೈಪರೀತ್ಯ ಮೀನು ಹಿಡಿಯಲಾಗದೆ ಕಂಗಾಲಾಗಿರುವ ಮೀನುಗಾರರು ಬೊಬ್ಬರ್ಯ ದೈವಕ್ಕೆ ಮೊರೆ ಹೋಗಿದ್ದಾರೆ. ಮಲ್ಪೆಯ ಕಲ್ಮಾಡಿ ಎಂಬಲ್ಲಿನ ಗುಡ್ಡೆಯಲ್ಲಿರುವ ಬೊಬ್ಬರ್ಯ ದೈವಸ್ಥಾನದಲ್ಲಿ ಮೀನುಗಾರರು ಸಮುದ್ರವನ್ನು ಶಾಂತಗೊಳಿಸಿ ಮೀನುಗಾರಿಕೆಗೆ ಸಹಾಯ ಮಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.ಮಳೆಗಾಲ ಮತ್ತು ಮೀನುಗಳ ಸಂತಾನೋತ್ಪತ್ತಿಯ ಹಿನ್ನೆಲೆಯಲ್ಲಿ ಜು.1ರಿಂದ ಆ.15ರವರೆಗೆ ಯಾಂತ್ರಿಕ ದೋಣಿಗಳಿಂದ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಮೀನುಗಾರರು ನಿತ್ಯದ ಹೊಟ್ಟೆಪಾಡಿಗೆ ಸಣ್ಣ ನಾಡದೋಣಿಗಳಲ್ಲಿ ಮೀನುಗಾರಿಕೆ ನಡೆಸುತ್ತಾರೆ.
ಆದರೆ, ಈ ಬಾರಿ ಕರಾವಳಿಯಲ್ಲಿ ವಿಪರೀತ ಗಾಳಿ, ಮಳೆಯಾಗುತ್ತಿದೆ. ಇತ್ತೀಚೆಗೆ ಬೈಂದೂರಿನಲ್ಲಿ ಗಾಳಿಗೆ ದೋಣಿ ಮಗುಚಿ 3 ಮಂದಿ ಮೀನುಗಾರರು ಸಮುದ್ರಕ್ಕೆ ಬಲಿಯಾಗಿದ್ದಾರೆ. ಜುಲೈ ತಿಂಗಳು ಕಳೆಯುತ್ತಿದ್ದರೂ ಹವಾಮಾನ ವೈಪರೀತ್ಯದಿಂದಾಗಿ ದೋಣಿಗಳನ್ನು ಸಮುದ್ರಕ್ಕೆ ಇಳಿಸಲಾಗದೇ ಮೀನುಗಾರರು ಸಂಕಷ್ಟಕ್ಕೊಳಗಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಮೀನುಗಾರರು ತಮ್ಮ ಆರಾಧ್ಯ ದೈವ ಕಲ್ಮಾಡಿಯ ಬೊಬ್ಬರ್ಯನ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ದರ್ಶನ ನಡೆಸಿದರು. ಈ ಸಂದರ್ಭದಲ್ಲಿ ಬೊಬ್ಬರ್ಯ ಪಂಜು ಹಿಡಿದು ಕಲ್ಮಾಡಿ ನದಿಯವರೆಗೆ ಸವಾರಿ ಮಾಡಿತು. ಈ ಸಂದರ್ಭ ಮೀನುಗಾರರು ಸಮುದ್ರಕ್ಕೆ ಇಳಿಯುವ ಮೀನುಗಾರರನ್ನು ರಕ್ಷಣೆ ಮಾಡುವಂತೆ, ತಮ್ಮ ಕುಲಕಸುಬು ಸಾಂಗವಾಗಿ ನಡೆಯುವಂತೆ ಮತ್ತು ಹೇರಳ ಮೀನು ಸಿಗುವಂತೆ ಪ್ರಾರ್ಥನೆ ಮಾಡಿದರು, ಇದಕ್ಕೆ ಮಣಿದ ದೈವ ಮೀನುಗಾರರಿಗೆ ಅಭಯ ನೀಡಿದೆ. ದೈವದ ನುಡಿಯಂತೆ ಉಳಿದ 20 ದಿನಗಳಲ್ಲಿ ದೋಣಿಗಳು ಸಮುದ್ರಕ್ಕೆ ಇಳಿದು ಬುಟ್ಟಿ ತುಂಬಾ ಮೀನು ಸಿಕ್ಕು, ಹೊಟ್ಟೆ ತುಂಬಾ ಊಟ ಮಾಡುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.