ಹಾವೇರಿ:ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಗುಡುಗು, ಗಾಳಿ ಸಹಿತ ಕೆಲಕಾಲ ಮಳೆಯಾಗಿದ್ದರಿಂದ ವಾತಾವರಣ ತಂಪಾಯಿತು. ಬೆಳಗ್ಗೆಯಿಂದ ಸಂಜೆ ವರೆಗೆ ಬಿಸಿಲಿನ ವಾತಾವರಣದಿಂದ ಕೂಡಿತ್ತು. ಸಂಜೆ ಏಕಾಏಕಿ ಜೋರಾದ ಗಾಳಿ ಸಹಿತ ಕೆಲಕಾಲ ಮಳೆಯಾಯಿತು. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ತಂಪು ವಾತಾವರಣದ ಅನುಭವ ನೀಡಿತು.

ಹಾವೇರಿ ನಗರದಲ್ಲಿ ಸಂಜೆ ಏಕಾಏಕಿ ಗಾಳಿ ಸಹಿತ ಕೆಲಕಾಲ ಮಳೆಯಾಗಿದ್ದರಿಂದ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಿದ್ಧತೆಗೆ ಮಾರುಕಟ್ಟೆಗೆ ಆಗಮಿಸಿದ್ದ ಜನರು ಸಮಸ್ಯೆ ಎದುರಿಸುವಂತಾಯಿತು.

ಉಳಿದಂತೆ ಜಿಲ್ಲೆಯ ರಾಣಿಬೆನ್ನೂರ, ಬ್ಯಾಡಗಿ, ಶಿಗ್ಗಾಂವಿ, ಸವಣೂರು, ಹಾನಗಲ್ಲ, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಭಾಗದಲ್ಲಿ ಮಳೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಒಕ್ಕಲುತನದಲ್ಲಿ ತೊಡಗಿದ್ದ ರೈತರು ಬೇಸಿಗೆಯ ಅಕಾಲಿಕ ಮಳೆಯಿಂದ ಸಮಸ್ಯೆ ಎದುರಿಸುವಂತಾಯಿತು. ಇನ್ನು ಅಡಕೆ ಗಿಡ, ಬಾಳೆ ಗಿಡ ನಾಟಿ ಮಾಡಲು ಕೆಲ ರೈತರಿಗೆ ಮಳೆಯಿಂದ ಅನುಕೂಲವಾಗಿದೆ.