ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬಿಸಿಲಿನ ತಾಪಮಾನ, ಬಿಸಿ ಗಾಳಿಯಿಂದ ಕಂಗಾಲಾಗಿದ್ದ ಜನರಿಗೆ ಶುಕ್ರವಾರ ಸಂಜೆ ಕೆಲಕಾಲ ಮಳೆ ಸುರಿದು ವಾತಾವರಣವನ್ನು ತಂಪಾಗಿಸಿತು.ಕಳೆದ ಕೆಲ ದಿನಗಳಿಂದ ಬಿಸಿಲಿನ ತಾಪಮಾನದ ಏರಿಕೆಯಿಂದ ಜನರು ತತ್ತರಿಸಿದ್ದರು. ಕಳೆದ ಮೂರು ದಿನಗಳಿಂದ 39 ಡಿಗ್ರಿಗೆ ತಾಪಮಾನ ಏರಿಕೆಯಾಗಿತ್ತು. ಉಷ್ಣಹವೆಯಿಂದ ಜನಸಾಮಾನ್ಯರನ್ನು ಕಂಗೆಡಿಸಿತ್ತು.
ಶುಕ್ರವಾರ ಬೆಳಗ್ಗೆಯಿಂದ ಸುಡು ಬಿಸಿಲಿನ ವಾತಾವರಣ, ಉಷ್ಣಹವೆ ಸಾಮಾನ್ಯವಾಗಿತ್ತು. ಸಂಜೆ 4 ಗಂಟೆ ನಂತರ ಮೋಡ ಮುಸುಕಿದ ವಾತಾವರಣ ಉಂಟಾಗಿ ಬಿರುಗಾಳಿ ಸಹಿತ 15 ನಿಮಿಷಕ್ಕೂ ಹೆಚ್ಚು ಕಾಲ ಮಳೆ ಸುರಿಯಿತು. ಆದರೆ, ಜೋರಾಗಿ ಬೀಸಿದ ಬಿರುಗಾಳಿಯಿಂದಾಗಿ ಮಳೆ ಬಂದಷ್ಟೆ ವೇಗವಾಗಿ ನಿಂತಿ ಹೋಯಿತು.ಅಲ್ಪ ಕಾಲ ಸುರಿದ ಮಳೆಯಿಂದಾಗಿ ವಾತಾವರಣವನ್ನು ತಂಪಾಗಿಸಿತು. ಮನೆ, ಕಚೇರಿಗಳ ಹೊರಗಡೆ ತಾಪಮಾನವನ್ನು ತಂಪಾಗಿಸಿದರೂ ಒಳಗೆ ಮಾತ್ರ ಬಿಸಿ ತಾಪಮಾನ ಹಾಗೆ ಇತ್ತು. ಮಂಡ್ಯ ತಾಲೂಕು ಸೇರಿದಂತೆ ಇತರೆಡೆ ಸಾಧಾರಣ ಮಳೆಯಾದ ವರದಿಯಾಗಿತ್ತು.ಮಳೆ ಸುರಿದರೂ ಮತ್ತಷ್ಟು ಹೆಚ್ಚಾದ ತಾಪಮಾನ
ಭಾರತೀನಗರ:ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನತೆಗೆ ವರ್ಷದ ಮೊದಲ ಮಳೆ ಸುರಿದು ಅಲ್ಪಮಟ್ಟಿಗೆ ಜನರಲ್ಲಿ ಖುಷಿತಂದಿದೆ.ಕಳೆದ ಒಂದೂವರೆ ತಿಂಗಳಿಂದಲೂ ಬೇಸಿಗೆ ತಾಪಮಾನದಿಂದ ಬಳಲುತ್ತಿದ್ದ ಜನತೆಗೆ ಮಳೆರಾಯ ಸುರಿದು ವಾತಾವರಣವನ್ನು ತಂಬಾಗಿಸಿದರೂ ಕೆಲವು ನಿಮಿಷದಲ್ಲೇ ಮಳೆ ನಿಂತುಹೋದ ಕಾರಣ ಜನರಲ್ಲಿ ಬೇಸರ ಉಂಟಾಯಿತು. ಇದರಿಂದ ಮತ್ತಷ್ಟು ಭೂಮಿಯ ತಾಪಮಾನ ಹೆಚ್ಚಳವಾಯಿತು.
ಮಳೆರಾಯನಿಗೆ ಪೂಜೆ, ಸಂಜೆ ವೇಳೆಗೆ ಸುರಿದು ಗ್ರಾಮಸ್ಥರ ಸಂಭ್ರಮಕನ್ನಡಪ್ರಭ ವಾರ್ತೆ ಮಂಡ್ಯಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಹಳುವಾಡಿ ಗ್ರಾಮದ ಯುವಕರು ಶುಕ್ರವಾರ ಮಳೆರಾಯನಿಗೆ ಪೂಜೆ ಸಲ್ಲಿಸಿದ ನಂತರ ಸಂಜೆ ವೇಳೆಗೆ ಮಳೆ ಸುರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದರು.ಕಳೆದ ಕೆಲ ತಿಂಗಳಿಂದ ಮಳೆ ಇಲ್ಲದೇ ಬಿಸಿಲ ತಾಪದಿಂದ ರೋಸಿ ಹೋಗಿದ್ದ ಗ್ರಾಮದ ಯುವಕರು, ಗ್ರಾಮಸ್ಥರ ಸಹಕಾರದಲ್ಲಿ ಮಳೆರಾಯನಿಗೆ ಪೂಜೆ ಮಾಡಲು ನಿರ್ಧರಿಸಿದರು.
ಅದರಂತೆ ಶುಕ್ರವಾರ ಬೆಳಗ್ಗೆ ಮಳೆಗಾಗಿ ಪ್ರಾರ್ಥಿಸಿ ಮಳೆರಾಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಬಿಂದಿಗೆಯಲ್ಲಿ ನೀರು ತುಂಬಿ ತಲೆ ಮೇಲೆ ಹೊತ್ತು ತಮಟೆ ಸದ್ದಿನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.ಈ ವೇಳೆ ಪ್ರತಿ ಮನೆ ಮನೆಯಲ್ಲೂ ಒಂದೊಂದು ಬಿಂದಿಗೆ ನೀರು ಕೊಟ್ಟು ಮಳೆರಾಯನಿಗೆ ಸುರಿದು ಮಳೆ ಸುರಿಯುವಂತೆ ಪ್ರಾರ್ಥಿಸಿದರು. ಮಹಿಳೆಯರು ಕೂಡ ಮಳೆರಾಯನಿಗೆ ಪೂಜೆ ಸಲ್ಲಿಸಿದರು.ಹೀಗೆ ಬೆಳಗ್ಗೆಯಿಂದ ಸಂಜೆ 4 ಗಂಟೆವರೆಗೂ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ದವಸ, ಧಾನ್ಯ ಸಂಗ್ರಹಿಸಿದರು. ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿ ಬಿರುಗಾಳಿ ಸಹಿತ ಮಳೆ ಸುರಿಯಿತು.ಮಳೆರಾಯನಿಗೆ ಪೂಜೆ ಸಲ್ಲಿಸಿದ ಪರಿಣಾಮ ಗ್ರಾಮದಲ್ಲಿ ಮಳೆಯಾಗುತ್ತಿದೆ ಎಂದು ಗ್ರಾಮಸ್ಥರು, ಯುವಕರು ಸಂಭ್ರಮ ಪಟ್ಟರು. ನಂತರ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ದವಸ, ಧಾನ್ಯದಲ್ಲಿ ಅಡುಗೆ ತಯಾರಿಸಿ ಗ್ರಾಮದ ಪಟ್ಟಲದಮ್ಮ ದೇಗುಲದ ಬಳಿ ಜನರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.