ಸಾರಾಂಶ
ಕಳೆದೆರಡು ದಿನಗಳಿಂದ ಮುಂಜಾನೆ ಮತ್ತು ಸಂಜೆ ವೇಳೆ ತುಂತುರು ಮಳೆಯಾಗುತ್ತಿದೆ.
ಗೋಕರ್ಣ: ಕಳೆದೆರಡು ದಿನಗಳಿಂದ ಮುಂಜಾನೆ ಮತ್ತು ಸಂಜೆ ವೇಳೆ ತುಂತುರು ಮಳೆಯಾಗುತ್ತಿದೆ. ಈ ಭಾಗದಲ್ಲಿ ಸೋಮವಾರ ಮಧ್ಯಾಹ್ನ ಗುಡುಗು ಸಹಿತ ಭಾರಿ ಮಳೆ ಸುರಿದಿದೆ.
ಬೇಸಿಗೆಯ ತಾಪಮಾನಕ್ಕೆ ಹೈರಾಣ ಆಗಿದ್ದ ಜನರಿಗೆ ತುಸು ತಂಪು ಎರಚಿದರೆ, ಏಕಾಏಕಿ ಬಂದ ಮಳೆಯಿಂದ ಪ್ರವಾಸಿಗರು ಛತ್ರಿ, ರೇನ್ ಕೋಟ್ ಹುಡುಕುತ್ತಾ ಅತ್ತಿತ್ತ ಸಾಗಿರುವ ದೃಶ್ಯ ಕಂಡುಬಂತು.ಎರಡು ತಾಸಿಗೂ ಅಧಿಕ ಕಾಲ ಅಬ್ಬರಿಸಿದ ಮಳೆಯಿಂದ ಮಹಾಗಣಪತಿ, ಮಹಾಬಲೇಶ್ವರ ಮಂದಿರದ ಬಳಿ ಎಂದಿನಂತೆ ಮಳೆಯ ರಾಡಿ ನೀರು ರಸ್ತೆಯಲ್ಲಿ ನಿಂತು ಭಕ್ತರಿಗೆ ತೆರಳಲು ತೊಂದರೆಯಾಗುವುದು ಮುಂದುವರಿದಿತ್ತು. ಚರಂಡಿ ಹೂಳೆತ್ತುವ ಕಾರ್ಯವು ಸಹ ಅರೆಬರೆಗೊಂಡಿದ್ದ ಪರಿಣಾಮ ಅಲ್ಲಲ್ಲಿ ನೀರು ನಿಂತು ತೊಂದರೆಯಾಗಿತ್ತು.
ಇನ್ನು ಈ ಭಾಗದಲ್ಲಿ ಬೆಳೆದ ಕಲ್ಲಂಗಡಿ ಬೆಳೆಗೆ ಈ ಮಳೆ ತೊಂದರೆ ನೀಡಿದ್ದು ಜೊತೆಯಲ್ಲಿ ಅಳಿದುಳಿದ ತರಕಾರಿ ಬೆಳೆಗೂ ಹಾನಿ ಉಂಟುಮಾಡಿದೆ. ಒಟ್ಟಾರೆ ಮುಂಗಾರು ಆರಂಭಕ್ಕೂ ಮುನ್ನ ಬೇಸಿಗೆ ಮಳೆ ಜನರಿಗೆ ಮಿಶ್ರ ಪ್ರತಿಫಲ ನೀಡಿದೆ.ನೀರಿನಲ್ಲಿ ಮುಳುಗಿದ ಉಪ್ಪಿನ ಆಗರ:
ಈ ಬಾರಿ ಉಪ್ಪು ಹಂಗಾಮು ಪ್ರಾರಂಭವಾದಾಗಿನಿಂದ ವಿಘ್ನ ಅನುಭವಿಸಿದ ಸಾಣಿಕಟ್ಟಾದ ಉಪ್ಪು ಉತ್ಪಾದನೆ ಪ್ರದೇಶದಲ್ಲಿ ಇಳುವರಿ ಇಳಿಮುಖಗೊಂಡಿದೆ. ಮೇ ತಿಂಗಳಲ್ಲಿ ಅತಿ ಹೆಚ್ಚು ಉಪ್ಪು ಉತ್ಪಾದನೆ ಆಗುತ್ತಿದ್ದು, ಈ ಹಂಗಾಮಿನ ಮೇ ತಿಂಗಳ ಪ್ರಾರಂಭದಿಂದಲೂ ಮಳೆಯಾಗಿದ್ದು, ಮುಕ್ತಾಯದ ಕ್ಷಣಗಳನ್ನು ಎಣಿಸುತ್ತಿದೆ.