ಹರಿಹರ ತಾಲೂಕಿನಲ್ಲಿ ಮಳೆಯಾರ್ಭಟ: 6 ಮನೆಗಳಿಗೆ ಹಾನಿ

| Published : Oct 18 2024, 12:06 AM IST / Updated: Oct 18 2024, 12:07 AM IST

ಸಾರಾಂಶ

ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆ ಹಾಗೂ ದೇವರ ಬೆಳಕೆರೆ ನಾಲೆ ಹೂಳು ತುಂಬಿದ ಕಾರಣ ಗುರುವಾರ ಹರಿಹರ ನಗರದ ಅನೇಕ ಬಡಾವಣೆಗಳಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

- ರೈಲ್ವೆ ಬಿಡ್ಜ್ ಬಳಿ ಕಾಲುವೆ ನೀರು ನುಗ್ಗಿ 1 ಕಿಮೀ ದೂರದವರೆಗೆ ಮೊಣಕಾಲುದ್ದ ನೀರು - - -ಕನ್ನಡಪ್ರಭ ವಾರ್ತೆ ಹರಿಹರ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆ ಹಾಗೂ ದೇವರ ಬೆಳಕೆರೆ ನಾಲೆ ಹೂಳು ತುಂಬಿದ ಕಾರಣ ಗುರುವಾರ ನಗರದ ಅನೇಕ ಬಡಾವಣೆಗಳಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಗರದ ಜೈ ಭೀಮ ನಗರದಲ್ಲಿ ಮನೆ ಗೋಡೆ ಕುಸಿದು 3 ವರ್ಷದ ಆಯೇಷಾ ಉಮ್ರಾ ಹೆಸರಿನ ಮಗು ಗಾಯಗೊಂಡು, ಸಾವು ಬದುಕಿನೊಂದಿಗೆ ಸೆಣಸುತ್ತಿದೆ. ಸದ್ಯಕ್ಕೆ ದಾವಣಗೆರೆಯ ಎಸ್‍ಎಸ್ ಆಸ್ಪತ್ರೆಯ ಐಸಿ ವಾರ್ಡ್‌ಗೆ ದಾಖಲಿಸಲಾಗಿದೆ.

ನಗರದ ಕಾಳಿದಾಸ ನಗರ, ಬೆಂಕಿ ನಗರ, ಪ್ರಶಾಂತ ನಗರ, ನೀಲಕಂಠ ನಗರ, ಜನತಾ ಕಾಲೋನಿ, ದಾವಣಗೆರೆಯಿಂದ ಹರಿಹರಕ್ಕೆ ಬರುವ ರಸ್ತೆ ಸೇರಿದಂತೆ ನಾಲೆ ಸುತ್ತಮುತ್ತಲ ಬಡಾವಣೆಗಳಿಗೆ ನೀರು ನುಗ್ಗಿ ಹೆಚ್ಚಿನ ಮನೆಗಳು ಜಲಾವೃತವಾಗಿವೆ.

ದಾವಣಗೆರೆಯಿಂದ ಹರಿಹರಕ್ಕೆ ಬರುವ ರಸ್ತೆಯ ರೈಲ್ವೆ ಬಿಡ್ಜ್ ಬಳಿ ಕಾಲುವೆ ನೀರು ನುಗ್ಗಿ, ಜೆ.ಸಿ. ಬಡಾವಣೆ, ವಿದ್ಯಾ ನಗರ ಸಂಪರ್ಕಿಸುವ ರಸ್ತೆಯವರೆಗೆ ಸುಮಾರು 1 ಕಿ.ಮೀ.ನಷ್ಟು ದೂರ ಮೊಣಕಾಲುವರೆಗೆ ನೀರು ನಿಂತಿತ್ತು. ಪರಿಣಾಮ ಬೆಳಗಿನಿಂದ ಸಂಜೆವರೆಗೆ ದಾವಣಗೆರೆಯಿಂದ ಬರುವ ವಾಹನಗಳು ಹಾಗೂ ಇಲ್ಲಿನ ಮನೆಗಳು ಹಾಗೂ ಅಂಗಡಿಗಳ ಜನತೆ ಪರದಾಡಬೇಕಾಯಿತು.

ಅಮರಾವತಿ ಕಾಲೋನಿ, ಕೇಶವ ನಗರ, ಟಿಪ್ಪು ನಗರ, ವಿಜಯ ನಗರ ಸೇರಿದಂತೆ ಸುತ್ತಮುತ್ತ ಇರುವ ಬಡಾವಣೆಗಳ ನೀರು ಹರಿಯಲು 10 ಕಣ್ಣಿನ ರಾಜ ಕಾಲುವೆ ಇತ್ತು. ಆ ಭಾಗದಲ್ಲಿ ಅಧಿಕಾರಿಗಳು ಸರ್ವೆ ಮಾಡದೇ ಮನೆಗಳನ್ನು ನಿರ್ಮಿಸಲು ಅನುಮತಿ ಕೊಟ್ಟಿದ್ದಾರೆ. ಇದರಿಂದ ನೀರು ಸರಾಗವಾಗಿ ಹರಿಯದೇ, ಅದನ್ನು ಮುಚ್ಚಿಸಿ, ಪೈಪ್ ಲೈನ್ ಹಾಕಿಸಲಾಗಿತ್ತು. ತದನಂತರ ಅಲ್ಲಿನ ರೈತರು ಜಮೀನಿನಲ್ಲಿ ಪೈಪ್‍ಲೈನ್ ಹಾದುಹೋಗಿದೆ ಎಂದು ಪೈಪ್‍ಲೈನ್‍ನಲ್ಲಿ ನೀರು ಹೋಗದಂತೆ ಮುಚ್ಚಿದ್ದಾರೆ. ಇದರಿಂದ ನಗರದ ಆಶ್ರಯ ಕಾಲೋನಿಯಲ್ಲಿ ಜಲಾವೃತವಾಗಿದೆ. ಈ ಬಗ್ಗೆ 8 ಬಾರಿ ದೂರು ನೀಡಿದರೂ ಸರಿಪಡಿಸಿಲ್ಲ ಎಂದು ನಗರಸಭಾ ಸದಸ್ಯ ಆಟೋ ಹನುಮಂತಪ್ಪ ಆಡಳಿತ ವಿರುದ್ಧ ದೂರಿದರು.

ತಾಲೂಕಿನ ಕೊಂಡಜ್ಜಿಯಲ್ಲಿ 3 ಮನೆಗಳು ಸೇರಿದಂತೆ ಭಾನುವಳ್ಳಿ, ನಿಟ್ಟೂರು, ಸಲಗನಹಳ್ಳಿ ಹಾಗೂ ರಾಜನಹಳ್ಳಿಯಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿದೆ. ಶಾಸಕ ಬಿ.ಪಿ. ಹರೀಶ್, ನಂದಿಗಾವಿ ಶ್ರೀನಿವಾಸ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ, ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಸೇರಿದಂತೆ ವಿವಿಧ ಮುಖಂಡರು ವಿವಿಧ ಬಡಾವಣೆಗಳಿಗೆ ಭೆಟ್ಟಿ ನೀಡಿ, ಪರಿಶೀಲಿಸಿದರು.

- - -

ಬಾಕ್ಸ್‌ * ನಾಳೆ ಹೂಳೆತ್ತಿದ್ದರೆ ಜಲಾವೃತ ಆಗುತ್ತಿರಲಿಲ್ಲಹರಿಹರದ ಪೂರ್ವ ಭಾಗದಲ್ಲಿರುವ ದೇವರಬೆಳಕೆರೆ ನಾಲೆಯಲ್ಲಿ ಹೂಳು ತುಂಬಿ ಬಹಳ ವರ್ಷಗಳಾಗಿವೆ. ಇದರಿಂದಾಗಿ ಗುತ್ತೂರು ಅಮರಾವತಿ ಸೇರಿದಂತೆ ನಾಲೆ ಕೊನೆ ಭಾಗದ ರೈತರಿಗೆ ನಾಲೆಯಲ್ಲಿ ನೀರು ಹರಿಸಿದರೂ ತಲುಪುತ್ತಿಲ್ಲ. ಈ ಕುರಿತ ದೂರುಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರ ಪರಿಣಾಮ ಇಲ್ಲಿನ ರೈತರೇ ಸ್ವಂತ ಹಣ ಹಾಕಿ, ಜೆಸಿಬಿ ಮೂಲಕ ನಾಲೆ ಹೂಳು ತೆಗೆಸಲು ಪ್ರಯತ್ನಿಸಿದ್ದರು. ಆದರೆ ಪ್ರಯತ್ನ ಫಲ ನೀಡಲಿಲ್ಲ. ಹೂಳು ತೆಗೆಸುವ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಿದ್ದರೆ ನಗರದ ವಿವಿಧ ಬಡಾವಣೆಗಳು ಜಲಾವೃತ ಅಗುತ್ತಿದ್ದಿಲ್ಲ ಎಂಬುದು ರೈತರ ಆಕ್ರೋಶ.

- - - -17ಎಚ್‍ಆರ್‍ಆರ್3:

ಹರಿಹರ- ದಾವಣಗೆರೆ ರಸ್ತೆಯ ರೈಲ್ವೆ ಬಿಡ್ಜ್ ಬಳಿ ಕಾಲುವೆ ನೀರು ನುಗ್ಗಿದ ಪ್ರಯುಕ್ತ ಸುಮಾರು 1 ಕಿ.ಮೀ. ದೂರದವರೆಗೆ ಮೊಣಕಾಲು ಎತ್ತರಕ್ಕೆ ಮಳೆನೀರು ನಿಂತು ವಾಹನಗಳ ಸವಾರರು, ಪಾದಾಚಾರಿಗಳು ಸಂಚಾರಕ್ಕೆ ಪರದಾಡಬೇಕಾಯಿತು.

-17ಎಚ್‍ಆರ್‍ಆರ್3ಎ:

ಹರಿಹರದ ಆಶ್ರಯ ಕಾಲೋನಿಯ ಸರ್ಕಾರಿ ಶಾಲೆ ಜಲಾವೃತವಾಗಿರುವುದು.