ಜಿಲ್ಲೆಯಲ್ಲಿ ಮಳೆರಾಯ ಆಗಮನ; ರೈತ ಮೊಗದಲ್ಲಿ ಸಂತಸ

| Published : Jun 07 2024, 12:16 AM IST

ಸಾರಾಂಶ

ಬಂಗಾರಪೇಟೆ ತಾಲೂಕಿನ ಮಾವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ೪೮ ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬಿದ್ದ ಪ್ರದೇಶವಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಬುಧವಾರ ಮಳೆರಾಯ ಮಧ್ಯರಾತ್ರಿಯವರೆಗೂ ಎಡಬಿಡದೆ ನಿರಂತರವಾಗಿ ಸುರಿಯುತ್ತಲೇ ಇದುದ್ದರಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೋಲಾರದ ಜನತೆಯು ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ಒದಗಿಬಂತು.

ರಾತ್ರಿ ೭ ಗಂಟೆಗೆ ಪ್ರಾರಂಭವಾದ ಮಳೆರಾಯ ಗುಡುಗು, ಸಿಡಿಲಿನ ಮೂಲಕ ರಾತ್ರಿಯಿಡೀ ಸುರಿಯುತ್ತಲೇ ಇತ್ತು.ಇದರಿಂದ ಹಲವೆಡೆ ವಿದ್ಯುತ್ ಅಡಚಣೆ ಉಂಟಾಯಿತು. ಮಳೆ ಗಾಳಿಗೆ ಹಲವೆಡೆ ಮರಗಳು ಧರೆಗುರುಳಿದವು.

ಬಂಗಾರಪೇಟೆ ತಾಲೂಕಿನ ಮಾವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ೪೮ ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬಿದ್ದ ಪ್ರದೇಶವಾಗಿದೆ.

ಇನ್ನುಳಿದಂತೆ ಕೋಲಾರ ತಾಲೂಕಿನ ಅಮ್ಮನಲ್ಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ೪.೧ ಸೆಂಮೀ., ಹರಟಿಯಲ್ಲಿ ೨ ಸೆಂಮೀ., ಬೆಳ್ಳೂರಿನಲ್ಲಿ ೧.೪ ಸೆಂ.ಮೀ., ಬಂಗಾರಪೇಟೆ ತಾಲೂಕಿನ ಎನ್.ಜಿ.ಹುಲ್ಕೂರಿನಲ್ಲಿ ೨.೯ ಸೆಂ.ಮೀ., ಮಾಲೂರು ತಾಲೂಕಿನ ಶಿವರಾಯಪಟ್ಟಣದಲ್ಲಿ ೨ ಸೆಂ.ಮೀ., ಮುಳಬಾಗಿಲು ತಾಲೂಕಿನ ಮೋತಕಪಲ್ಲಿಯಲ್ಲಿ ೨.೮ ಸೆಂ.ಮೀ,, ಆಲಂಗೂರಿನಲ್ಲಿ ೨.೫ ಸೆಂ.ಮೀ., ಎಮ್ಮೆನತ್ತದಲ್ಲಿ ೨.೩ ಸೆಂ.ಮೀ., ಶ್ರೀನಿವಾಸಪುರ ತಾಲೂಕಿನ ಯರಂವಾರಿಪಳ್ಳಿಯಲ್ಲಿ ೨.೪ ಸೆಂ.ಮೀ. ಹಾಗೂ ಗೌನಿಪಲ್ಲಿಯಲ್ಲಿ ೧.೭ ಸೆಂ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಬಿರುಸಿನ ಮಳೆಯಿಂದಾಗಿ ನಗರದ ರಸ್ತೆಗಳು ಉಕ್ಕಿ ಹರಿದವು. ರೈಲ್ವೆ ಅಂಡರ್‌ಪಾಸ್ ಬಳಿ ನೀರು ತುಂಬಿಕೊಂಡಿತ್ತು. ವಾಹನ ಸವಾರರು ಹಾಗೂ ಪಾದಚಾರಿಗಳು ಯಾತನೆ ಅನುಭವಿಸಿದರು. ಅಂತರಗಂಗೆ ರಸ್ತೆಯ ರೈಲ್ವೆ ಅಂಡರ್‌ಪಾಸ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಬಳಿ ಕೀಲುಕೋಟೆಗೆ ತೆರಳುವ ರೈಲ್ವೆ ಅಂಡರ್‌ಪಾಸ್‌ನಲ್ಲಿ ಕೂಡ ತೊಂದರೆ ಉಂಟಾಯಿತು.

ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೋಚಿಮಲ್ ಬಳಿ ಇರುವ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿತ್ತು. ನೀರು ಕೋಚಿಮುಲ್ ಆವರಣಕ್ಕೆ ಹರಿಯುತ್ತಿದ್ದ ದೃಶ್ಯ ಕಂಡುಬಂತು. ಕುವೆಂಪುರ ನಗರ, ರೈಲ್ವೆ ನಿಲ್ದಾಣ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿವೆ.

ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಮುಂಗಾರು ಹಂಗಾಮಿಗೆ ಸಿದ್ಧತೆ ನಡೆಸಿರುವ ರೈತರಿಗೆ ಈ ಮಳೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ. ಕೆಲವೆಡೆ ಬಿತ್ತನೆಯೂ ಶುರುವಾಗಿದೆ.

ಆರು ತಾಲ್ಲೂಕುಗಳಿಂದ ಸೇರಿ ಜಿಲ್ಲೆಯಲ್ಲಿ ಈ ವರ್ಷ ಒಟ್ಟು ೯೫,೪೪೮ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ರಾಗಿ ಬಿತ್ತನೆ ಗುರಿಯೇ ೬೦,೯೭೩ ಹೆಕ್ಟೇರ್ ಪ್ರದೇಶವಿದೆ.

ನಗರಸಭೆ ನಿರ್ಲಕ್ಷ್ಯ, ಆಕ್ರೋಶ

ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ನಗರದ ಬಹುತೇಕ ಕಡೆ ಚರಂಡಿ ತ್ಯಾಜ್ಯ ಹಾಗೂ ನೀರು ರಸ್ತೆಗೆ ಉಕ್ಕಿ ಹರಿದಿದೆ. ರಸ್ತೆಗಳಲ್ಲಿ, ವೃತ್ತಗಳಲ್ಲಿ, ರಸ್ತೆ ಗುಂಡಿಗಳಲ್ಲಿ ನೀರು ನಿಂತುಕೊಂಡಿತ್ತು, ತ್ಯಾಜ್ಯ ಹರಡಿಕೊಂಡಿತ್ತು. ನಗರದ ಹಲವೆಡೆ ಚರಂಡಿಗಳು ಮುಚ್ಚಿ ಹೋಗಿವೆ, ಇದರಿಂದ ಮಳೆ ನೀರು ಸರಾಗವಾಗಿ ಹರಿಯಲು ಜಾಗವೇ ಇಲ್ಲದಾಗಿದೆ. ಮಳೆ ಬಂದಾಗಲೆಲ್ಲಾ ಈ ಸಮಸ್ಯೆ ಉಂಟಾಗುತ್ತಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದೆ. ನಗರದಲ್ಲಿನ ಚರಂಡಿ ಅವ್ಯವಸ್ಥೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ದೂರು ನೀಡಿದರೂ ನಗರಸಭೆ ಆಯುಕ್ತರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.