ಸಾರಾಂಶ
ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದರೂ ಗುರುವಾರ ಮಳೆಯ ಅಬ್ಬರ ಕಡಿಮೆಯಾಗಿದೆ.
ಕಾರವಾರ; ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದರೂ ಗುರುವಾರ ಮಳೆಯ ಅಬ್ಬರ ಕಡಿಮೆಯಾಗಿದೆ. ಕಾರವಾರದಲ್ಲಿ ಗುರುವಾರವಿಡೀ ವಿದ್ಯುತ್ ಹಾಗೂ ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಜಿಲ್ಲೆಯಾದ್ಯಂತ ವಿವಿಧೆಡೆ ಆಗಾಗ ಭಾರಿ ಮಳೆ ಬಂದರೂ ಕೆಲವೇ ನಿಮಿಷಗಳಲ್ಲಿ ಮಳೆ ಇಳಿಮುಖವಾಗುತ್ತಿದೆ. ಇದರಿಂದ ನೀರು ಸಂಗ್ರಹವಾಗದೇ ಹರಿದು ಹೋಗುತ್ತಿದೆ.
ಕಾರವಾರದ ಅಲ್ಲಲ್ಲಿ ಗಿಡ, ರೆಂಬೆಗಳು ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದಿರುವುದರಿಂದ ದಿನವಿಡೀ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ದೂರವಾಣಿ ಹಾಗೂ ಬ್ರಾಡ್‌ಬ್ಯಾಂಡ್ ಸೇವೆಯಲ್ಲೂ ವ್ಯತ್ಯಯ ಉಂಟಾಗಿದೆ.ಶಿರೂರು ಪ್ರತಿಬಂಧಕಾಜ್ಞೆ:
ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿದು 10 ಜನರು ಮೃತಪಟ್ಟು, ಇಬ್ಬರು ಕಣ್ಮರೆಯಾದ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಕೆಲವು ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.ಈ ಪ್ರದೇಶದಲ್ಲಿ ಮಣ್ಣು ಸಡಿಲಗೊಂಡು ನೆಲಕ್ಕೆ ಉರುಳುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಭೂ ಕುಸಿತ ಪ್ರದೇಶ ಮತ್ತು ಮುಂಭಾಗದಲ್ಲಿ ಇರುವ ಗಂಗಾವಳಿ ನದಿಯ ವ್ಯಾಪ್ತಿಯನ್ನು ಆಪಾಯಕಾರಿ ವಲಯವೆಂದು ಘೋಷಿಸಿ, ಈ ಭಾಗದ ಗಂಗಾವಳಿ ನದಿಯಲ್ಲಿ ಮೀನುಗಾರಿಕೆ ಅಥವಾ ಸಾರ್ವಜನಿಕರು ನದಿಗೆ ಇಳಿಯುವುದು, ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುವುದು, ಸ್ಥಳದಲ್ಲಿ ನಿಂತು ಭಾವಚಿತ್ರಗಳನ್ನು ತೆಗೆಯವುದು ಹಾಗೂ ಇತರ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.