ಸಾರಾಂಶ
ಹಾಳಕುಸುಗಲ್ ಗ್ರಾಮದಲ್ಲಿ ನಿರ್ಮಾಣ ಹಂತದ ಚಾವಣಿ ಗಾಳಿಗೆ ಹಾರಿದ ಪರಿಣಾಮ ಪಕ್ಕದ ಫಕ್ರುಸಾಬ್ ಇಂಚಲ ಎಂಬುವರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಹೆಂಚಿನ ಚಾವಣಿ ಕುಸಿದು ಬಿದ್ದಿದೆ
ನವಲಗುಂದ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಭಸದ ಗಾಳಿಯೊಂದಿಗೆ ತುಂತುರು ಮಳೆಯಾಗಿದ್ದು, ಬಿಸಿಲಿನ ಧಗೆಗೆ ಬೇಸತ್ತ ಜನತೆಗೆ ಅಲ್ಪ ಪ್ರಮಾಣದ ತಂಪಿನ ಅನುಭವ ನೀಡಿತು. ತಾಲೂಕಿನ ಹಾಳಕುಸಗಲ್ ಗ್ರಾಮದಲ್ಲಿ ನಿರ್ಮಾಣ ಹಂತದ ಚಾವಣಿ ಗಾಳಿಗೆ ಹಾರಿದ ಘಟನೆ ನಡೆಯಿತು.
ಪಟ್ಟಣ ಸೇರದಿಂತೆ ತಾಲೂಕಿನ ಹನಸಿ, ಆಹಟ್ಟಿ, ಗೊಬ್ಬರಗುಂಪಿ, ಬಳ್ಳೂರ, ಜಾವೂರ ಹೆಬ್ಬಾಳ, ಅಮರಗೋಳ ಬೆಳವಟಗಿ, ಬೋಗಾನೂರ, ಖನ್ನೂರು, ಅಳಗವಾಡಿ, ಯಮನೂರ, ನಾಗನೂರು, ಸೊಟಕನಾಳ ಗ್ರಾಮಗಳಲ್ಲಿ ತುಂತುರು ಮಳೆಯಾಯಿತು.ತಾಲೂಕಿನ ಹಾಳಕುಸುಗಲ್ ಗ್ರಾಮದಲ್ಲಿ ನಿರ್ಮಾಣ ಹಂತದ ಚಾವಣಿ ಗಾಳಿಗೆ ಹಾರಿದ ಪರಿಣಾಮ ಪಕ್ಕದ ಫಕ್ರುಸಾಬ್ ಇಂಚಲ ಎಂಬುವರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಹೆಂಚಿನ ಚಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭಿವಿಸಿಲ್ಲ. ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನಾದ್ಯಂತ ಇನ್ನು 3 ದಿನಗಳ ಕಾಲ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆ ಯಲ್ಲೊ ಅಲರ್ಟ್ ಘೋಷಣೆ ಮಾಡಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ತಹಸೀಲ್ದಾರ್ ಸುಧೀರ ಸಾಹುಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.