ತಾಲೂಕುಗಳಲ್ಲಿ ಕೃಷಿ ನೀರಾವರಿ ಮತ್ತು ಕುಡಿಯುವ ನೀರಿನ ಬೋರ್‌ವೆಲ್‌ಗಳ ಸ್ಥಿತಿಗತಿಯನ್ನು ತಕ್ಷಣವೇ ಪರಿಶೀಲಿಸಬೇಕು.
ಬಳ್ಳಾರಿ: ಜಿಲ್ಲೆಯಲ್ಲಿ ಕುಡಿವ ನೀರು ಮತ್ತು ಮಳೆ ಕೊರತೆಯಿರುವ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ಸೂಕ್ತ ಕಾರ್ಯ ಯೋಜನೆ ರೂಪಿಸುವಂತೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಪಂ ಆಡಳಿತಾಧಿಕಾರಿಯೂ ಆದ ಡಾ.ಕೆ.ವಿ. ತ್ರಿಲೋಕಚಂದ್ರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ನಗರದ ಜಿಪಂ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕುಗಳಲ್ಲಿ ಕೃಷಿ ನೀರಾವರಿ ಮತ್ತು ಕುಡಿಯುವ ನೀರಿನ ಬೋರ್‌ವೆಲ್‌ಗಳ ಸ್ಥಿತಿಗತಿಯನ್ನು ತಕ್ಷಣವೇ ಪರಿಶೀಲಿಸಬೇಕು. ಕೆಟ್ಟು ಹೋಗಿರುವ ಪಂಪ್‌ಗಳನ್ನು ಹಾಗೂ ವಿದ್ಯುತ್ ಸಂಪರ್ಕದ ಸಮಸ್ಯೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಬೋರ್‌ವೆಲ್‌ಗಳ ದುರಸ್ತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಕ್ಷಣವೇ ಸೂಕ್ತ ವರದಿ ನೀಡಿ, ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ಇಒ ಮತ್ತು ಕೃಷಿ, ತೋಟಗಾರಿಕೆ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಒಟ್ಟಿಗೆ ಕುಳಿತು ಆಯಾ ತಾಲೂಕುಗಳಲ್ಲಿ ಎಷ್ಟು ಕೊಳವೆಬಾವಿಗಳಿವೆ? ಅವುಗಳಲ್ಲಿ ಕುಡಿಯುವ ನೀರಿಗೆ ಎಷ್ಟು, ಕೃಷಿ ನೀರಾವರಿಗೆ ಎಷ್ಟು ಮತ್ತು ಎರಡಕ್ಕೂ ಬಳಕೆಯಾಗುತ್ತಿರುವ ಕೊಳವೆಬಾವಿಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿ ಸಿದ್ಧಪಡಿಸಬೇಕು. ಮುಂಬರುವ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ಇನ್ನು ಎಷ್ಟು ಕೊಳವೆಬಾವಿಗಳು ಬತ್ತಿ ಹೋಗಬಹುದು ಎಂಬುದನ್ನು ಮುಂಚಿತವಾಗಿಯೇ ಊಹಿಸಿ, ಅದಕ್ಕೆ ತಕ್ಕಂತೆ ಸೂಕ್ತ ಯೋಜನೆಗಳನ್ನು ರೂಪಿಸಬೇಕು ಎಂದರು.
ಜಿಲ್ಲೆಯ ನೀರಾವರಿ ವ್ಯವಸ್ಥೆಯ ಒಟ್ಟು ವಿಸ್ತೀರ್ಣದಲ್ಲಿ 10,000 ಹೆಕ್ಟೇರ್ ಪ್ರದೇಶವು ಕೊಳವೆಬಾವಿ ನೀರಾವರಿ ಆಧಾರಿತವಾಗಿದೆ. ಉಳಿದ 41,141 ಹೆಕ್ಟೇರ್ ಪ್ರದೇಶವು ಸಂಪೂರ್ಣವಾಗಿ ಕಾಲುವೆ ನೀರಾವರಿ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಮಾತನಾಡಿ, ಕೆಲವು ಕೊಳವೆಬಾವಿಗಳು ಕೇವಲ ನೀರಿನ ಕೊರತೆಯಿಂದಷ್ಟೇ ಅಲ್ಲದೆ, ವಿದ್ಯುತ್ ಸಂಪರ್ಕದ ದೋಷ ಅಥವಾ ಪಂಪ್ ಸೆಟ್ ಕೆಟ್ಟುಹೋಗಿರುವುದರಿಂದ ಕೆಲಸ ಮಾಡುತ್ತಿರುವುದಿಲ್ಲ. ಇಂತಹ ಸಮಸ್ಯೆಗಳನ್ನು ಟಾಸ್ಕ್ ಫೋರ್ಸ್ ಮೂಲಕ ತಕ್ಷಣವೇ ಬಗೆಹರಿಸಬೇಕು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಇಒಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಬದಲಾವಣೆಗಳನ್ನು ಮಾಡಲು ಮುಕ್ತ ಅವಕಾಶವಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಕೆಎಂಇಆರ್ಸಿ ಅಡಿಯಲ್ಲಿ ಶಾಲಾ/ಪದವಿ ವಸತಿ ನಿಲಯಗಳ ಮೇಲ್ದರ್ಜೆಗೆ ಸಂಬಂಧಿಸಿದಂತೆ ಯೋಜನಾ ವರದಿಗಳನ್ನು ಶೀಘ್ರವಾಗಿ ಸಲ್ಲಿಸಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್ ಬಸವರಾಜ, ಎಡಿಸಿ ಮಹಮ್ಮದ್ ಝುಬೇರ್.ಎನ್., ಎಎಸ್ಪಿ ನವೀನ್ ಕುಮಾರ್, ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.