ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರಾವಳಿ, ಮಲೆನಾಡು, ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಶೃಂಗೇರಿಯ ಕಪ್ಪೆಶಂಕರ ದೇವಾಲಯ ಜಲಾವೃತವಾಗಿದೆ. ಇದೇ ವೇಳೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಗೇರುಸೊಪ್ಪ ಜಲಾಶಯದಿಂದ 13,500 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಹೊನ್ನಾವರ ತಾಲೂಕಿನ ಶರಾವತಿ ನದಿ ಗುಂಟ ನೂರಾರು ಮನೆಗಳು, ತೋಟ, ಹೊಲಗದ್ದೆಗಳು ಜಲಾವೃತಗೊಂಡಿವೆ. 15 ಕಾಳಜಿ ಕೇಂದ್ರಗಳಲ್ಲಿ 129 ಕುಟುಂಬಗಳ 368 ಜನರಿಗೆ ಆಶ್ರಯ ನೀಡಲಾಗಿದೆ. ಒಂದು ಮನೆಗೆ ಸಂಪೂರ್ಣ ಹಾನಿ ಉಂಟಾಗಿದೆ. ಕುಮಟಾ ತಾಲೂಕಿನ ಮಾದನಗೇರಿಯಲ್ಲಿ ರಸ್ತೆ ಮೇಲೆ ನೀರು ಪ್ರವಹಿಸಿ, ಸುಮಾರು ಎರಡು ಗಂಟೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಇದರಿಂದಾಗಿ ಗೋಕರ್ಣಕ್ಕೆ ತೆರಳುವ ಪ್ರವಾಸಿಗರು, ಭಕ್ತರು ಪರದಾಡುವಂತಾಯಿತು. ಹೊನ್ನಾವರದ ಎಲ್‌ಐಸಿ ಕಟ್ಟಡ ಸಮೀಪದ ಕರ್ನಲ್ ಕಂಬದ ಬಳಿ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿದೆ.
ಉಡುಪಿ ಜಿಲ್ಲೆ ಕಾಪು ತಾಲೂಕು ಮಲಂಗೋಳಿ ಎಂಬಲ್ಲಿ ಮನೆಯ ಗೋಡೆ ಕುಸಿದು, ಶೋಭಾ ಪೂಜಾರ್ತಿ ಎಂಬುವರು ಗಾಯಗೊಂಡಿದ್ದಾರೆ. ಜಿಲ್ಲೆಯಾದ್ಯಂತ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ.ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ಒಳಹರಿವು ಒಮ್ಮೆಲೆ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಜಲಾಶಯದ 14 ಕ್ರಸ್ಟ್ ಗೇಟ್‌ಗಳನ್ನು ತೆರೆದು ನದಿಗೆ 59,988 ಕ್ಯುಸೆಕ್ ನೀರು ಹರಿಸಲಾಗಿದೆ. ಇದರಿಂದ ಹಂಪಿಯ ಪುರಂದರದಾಸರ ಮಂಟಪ ಸೇರಿದಂತೆ ಕೆಲವು ಪ್ರಮುಖ ಮಂಟಪಗಳು ಜಲಾವೃತವಾಗಿವೆ.
ಬೀದರ್ ಜಿಲ್ಲೆ ಭಾಲ್ಕಿಯ ನಿಡೇಬಾನ್ ಗ್ರಾಮಸ್ಥರು ಜಲದಿಗ್ಬಂಧನಕ್ಕೆ ಒಳಗಾಗಿದ್ದು, ಕರೆಂಟ್ ಇಲ್ಲದೆ ಕತ್ತಲಲ್ಲಿ ಕಳೆಯುವಂತಾಗಿದೆ. ಕಲಬುರಗಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಅಫಜಲ್ಪುರ-ಮಣ್ಣೂರ ರಸ್ತೆ ಜಲಾವೃತಗೊಂಡಿದೆ. ಇದರಿಂದಾಗಿ ಸುತ್ತಮುತ್ತಲ 10 ಹಳ್ಳಿಗಳಿಗೆ ಹೊರಜಗತ್ತಿನ ಸಂಪರ್ಕ ಕಡಿತಗೊಂಡಿದೆ.