ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಲ್ಲಿ ಮತ್ತೆ ಮಳೆ ಆರ್ಭಟ ಹೆಚ್ಚಾಗಿದ್ದು, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭಾರಿ ಮಳೆ ಮುಂದುವರಿದಿದೆ. ಜಿಲ್ಲೆಯ ನಾಪೋಕ್ಲು ಸಮೀಪದ ಚೆರಿಯಪರಂಬುವಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇನ್ನೂ ಭಾರಿ ಮಳೆಯಾಗುವ ಸಂಭವವಿದ್ದು, ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಗುರುವಾರ ಜಿಲ್ಲೆಯ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ನಾಪೋಕ್ಲಿನಲ್ಲಿ ಧಾರಾಕಾರ ಮಳೆಯಿಂದ ಸಾಮಾನ್ಯ ಜನ ಜೀವನ ವ್ಯತ್ಯಯವಾಗಿದೆ. ಚೆರಿಯಪರಂಬು ಸೇರಿದಂತೆ ನದಿ ದಡದಲ್ಲಿ ವಾಸಿಸುವ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
ಮುಂದುವರಿದ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿ ನೀರಿನ ಹರಿಯುವಿಕೆ ಮಟ್ಟ ಮತ್ತಷ್ಟು ಹೆಚ್ಚಳವಾಗಿದೆ ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಮುಳುಗಡೆಯಾಗಿದೆ. ಮಂಗಳವಾರ ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ ಹರಿಯುತ್ತಿದ್ದ ನೀರುಬುಧವಾರ ಭಾಗಮಂಡಲ-ಮಡಿಕೇರಿ ರಸ್ತೆ ಮೇಲೂ ಹರಿಯುತ್ತಿದೆ. ನಾಪೋಕ್ಲು ರಸ್ತೆ ಮೇಲೆಎರಡೂವರೆ ಅಡಿಯಷ್ಟು ನೀರು ಹರಿಯುತ್ತಿದೆ. ಮಳೆ ಹೀಗೆ ಮುಂದುವರಿದರೆ ಮತ್ತಷ್ಟು ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆ ಎದುರಾಗಿದೆ.
ಲಕ್ಷಾಂತರ ರು. ವ್ಯಯಿಸಿ ಭಾಗಮಂಡಲದಲ್ಲಿ ನಿರ್ಮಿಸಿದ್ದ ನೂತನ ಉದ್ಯಾನವನವೂ ಮುಳುಗಡೆಯಾಗಿದ್ದು ನೂತನ ಉದ್ಯಾನವನ ಹಾಳಾಗುವ ಆತಂಕ ಉಂಟಾಗಿದೆ.ಹೆಚ್ಚಿನ ಮಳೆಯಿಂದ ಕೊಡ್ಲಿಪೇಟೆ ಹೋಬಳಿ, ಬೆಂಬಳೂರು ಗ್ರಾಮದ ಪಾರ್ವತಿ ದೊಡ್ಡಯ್ಯ ಎಂಬವರ ಮನೆ ಹಾನಿಯಾಗಿದೆ. ಭಾಗಮಂಡಲ ಹೋಬಳಿ ಬಿ.ಬಾಡಗ ಗ್ರಾಮದ ಕೆ.ಯು ಉಲ್ಲಾಸ ಬಿನ್ ಉತ್ತಯ್ಯ ಮನೆ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ವಿರಾಜಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯ ಹಾತೂರು ಬಳಿ ಮಳೆ ಗಾಳಿಯಿಂದ ಬಿದ್ದಿದ್ದ ಮರದ ತೆರವು ಕಾರ್ಯ ಪೂರ್ಣಗೊಂಡು, ವಾಹನಗಳು ಸಂಚರಿಸುತ್ತಿವೆ. ಹೆಚ್ಚಿನ ಮಳೆಯಿಂದ ಪೊನ್ನಂಪೇಟೆ ತಾಲೂಕಿನ ಕಾನೂರು- ಕುಟ್ಟ ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಗೋಣಿಕೊಪ್ಪ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿದರು.ಮಳೆಯಿಂದ ಕುಶಾಲನಗರ ಟೌನ್ ಕೈಗಾರಿಕೆ ಬಡಾವಣೆಯ ನಿವಾಸಿ ಮುತ್ತಮ್ಮ ಶಿವಣ್ಣ ವಾಸದ ಮನೆಯ ಗೋಡೆ ಹಾನಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ದುರಸ್ತಿ: ಭಾರಿ ಮಳೆಗೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಕರ್ತೋಜಿ ಎಂಬಲ್ಲಿ ಉಬ್ಬುತ್ತಿದೆ. 2019 ರಲ್ಲಿ ಹಾಳಾದ ಹೆದ್ದಾರಿ ದುರಸ್ತಿಗೆ ಆಗ, ಸಮೀಪದ ಬೆಟ್ಟದಿಂದ ಮಣ್ಣು ತೆಗೆಯಲಾಗಿತ್ತು. ಹೀಗಾಗಿ ತೀವ್ರ ಮಳೆಯಾದಂತೆಲ್ಲಾ ಹೆದ್ದಾರಿ ಕಡೆಗೆ ಬರೆ ಕುಸಿಯುತ್ತಿದೆ. ಬರೆ ಜರಿತ ಒತ್ತಡಕ್ಕೆ ಹೆದ್ದಾರಿ 275 ಉಬ್ಬುತ್ತಿದೆ. ಹೆದ್ದಾರಿ ಎರಡು ಅಡಿಗಳಷ್ಟು ಎತ್ತರಕ್ಕೆ ಉಬ್ಬಿದೆ. ಇದರಿಂದ ಮಡಿಕೇರಿ ಮಂಗಳೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಕೊಂಚ ಅಡ್ಡಿ ಎದುರಾಗಿದೆ. ಸದ್ಯ ಜೆಬಿಸಿ ಬಳಸಿ ಉಬ್ಬಿದ ಹೆದ್ದಾರಿ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿದೆ.ಬ್ಯಾರಿಕೇಡ್ ಹಾಕಿ ಹಾಳಾದ ರಸ್ತೆ ಭಾಗದಲ್ಲಿ ಸಂಚಾರಕ್ಕೆ ನಿರ್ಬಂಧ ಮಾಡಲಾಗಿದ್ದು, ಒಂದೇ ಭಾಗದಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಲಾಗಿದೆ.
..............................ಎರಡು ದಿನ ರೆಡ್ ಅಲರ್ಟ್
ಜಿಲ್ಲೆಯಲ್ಲಿ ಜು.18 ಹಾಗೂ 19ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ 24 ಗಂಟೆ ಅವಧಿಯಲ್ಲಿ 210 ಮಿಲಿ ಮೀಟರ್ ನಿಂದ 300 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆಯಿಯಿದೆ.ಇಂದು ರಜೆ
ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ರಜೆ ಘೋಷಿಸಿ ಆದೇಶಿಸಿದ್ದಾರೆ.