ಹಾವೇರಿ:ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಹಾಗೂ ಉಪವಾಸ ನಿರತ ವಿದ್ಯಾರ್ಥಿ-ಯುವಜನರ ಮೇಲೆ ನಡೆದಿರುವ ಪೊಲೀಸ್ ಗೂಂಡಾವರ್ತನೆಯನ್ನು ವಿರೋಧಿಸಿ ಎಸ್ಎಫ್‌ಐ ವಿಶ್ವವಿದ್ಯಾಲಯ ಘಟಕದ ನೇತೃತ್ವದಲ್ಲಿ ಹಾವೇರಿ ವಿವಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಹಗರಣಗಳ ಸಂಪೂರ್ಣ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು ಹಾಗೂ ಹಗರಣದ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಎಫ್‌ಐ ವಿವಿ ಘಟಕದ ಅಧ್ಯಕ್ಷೆ ಪೂಜಾ ಬಾರ್ಕಿ ಮಾತನಾಡಿ, ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿರುವುದು ಅನುಮಾನಾಸ್ಪದವಾಗಿದೆ. ಉಪವಾಸ ಸತ್ಯಾಗ್ರಹ ನಿರತ ವಿದ್ಯಾರ್ಥಿಗಳ ಮೇಲೆಯೇ ದಾಳಿ ಮಾಡಿಸುತ್ತಿರುವುದನ್ನು ನೋಡಿದರೆ ಹಗರಣದಲ್ಲಿ ಸರ್ಕಾರದ ಕೈವಾಡ ಸ್ಪಷ್ಟವಾಗುತ್ತದೆ. ಗೊಂದಲದಿಂದ ಬೇಸತ್ತು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ₹ ೫ ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಘಟಕದ ಕಾರ್ಯದರ್ಶಿ ಶಂಭುಲಿಂಗ ಸವದತ್ತಿ ಮಾತನಾಡಿ, ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಸೋನಂ ವಾಂಗ್ಚುಕ್ ಹಾಗೂ ವಿದ್ಯಾರ್ಥಿಗಳ ಮೇಲೆ ಜಂತರ್ ಮಂತರ್‌ನಲ್ಲಿ ಪೊಲೀಸರನ್ನು ಛೂ ಬಿಟ್ಟು ಲಾಠಿಚಾರ್ಜ್ ಹಾಗೂ ಟಿಯರ್ ಗ್ಯಾಸ್ ಬಳಸಿರುವುದು ಅಮಾನವೀಯ. ಅನೇಕ ವಿದ್ಯಾರ್ಥಿಗಳು ರಕ್ತಸಿಕ್ತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕ್ರೌರ್ಯವನ್ನು ಎಸ್ಎಫ್‌ಐ ಉಗ್ರವಾಗಿ ಖಂಡಿಸುತ್ತದೆ ಎಂದರು.ಉಪಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ೨೧ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡರೂ ಅಕ್ರಮ ತಡೆಯಲು ವಿಫಲವಾಗಿರುವ ಶಿಕ್ಷಣ ಸಚಿವರನ್ನು ಸಂಪುಟದಿಂದ ವಜಾಗೊಳಿಸದಿದ್ದರೆ, ಹಗರಣದಲ್ಲಿ ಸರ್ಕಾರದ ಪಾತ್ರವಿದೆ ಎಂಬುದನ್ನು ಪ್ರಧಾನಿ ಮೋದಿ ಒಪ್ಪಿಕೊಂಡಂತೆ. ಕಳೆದ ೧೦ ವರ್ಷಗಳಲ್ಲಿ ೮೦ಕ್ಕೂ ಹೆಚ್ಚು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಅಧಿಕಾರಿಗಳ ಮೇಲೆ ನೆಪ ಹಾಕಿ ಶಿಕ್ಷಣ ಸಚಿವರು ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಎಸ್ಎಫ್‌ಐ ವಿವಿ ಘಟಕದ ಉಪಾಧ್ಯಕ್ಷರಾದ ಪರಶುರಾಮ ಎಸ್., ಕಾಂತೇಶ್ ಹಳ್ಳೇರ್, ಸಹ ಕಾರ್ಯದರ್ಶಿ ಪ್ರವೀಣ್ ಮಟ್ಟೇರ, ಲೋಕೇಶ್ ಕೆಂಚಣ್ಣನವರ, ಶರಣ ಮಲ್ಲಕ್ಕನವರ ಹಾಗೂ ಮುಖಂಡರಾದ ಶಶಾಂಕ ಭೋಗಾವಿ, ಸಂತೋಷ್, ನಾಗರಾಜ್, ದೇವರಾಜ್, ಕಿರಣ್, ಸತೀಶ, ಶಿವರಾಜ ಲಮಾಣಿ, ಮಹಾಂತೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.