ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ), ಎನ್ಬಿಸಿಸಿ (ಇಂಡಿಯಾ) ಲಿಮಿಟೆಡ್‌ ಪ್ರಾಯೋಜಕತ್ವದಲ್ಲಿ ಸುಮಾರು ₹1.21 ಕೋಟಿ ವೆಚ್ಚದ ಮಹತ್ವದ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಮಳೆನೀರು ಕೊಯ್ಲು, ಜಲಾನಯನ ನಿರ್ವಹಣೆ ಹಾಗೂ ಜೈವಿಕ ವೈವಿಧ್ಯ ಸಂರಕ್ಷಣೆ ಮತ್ತು ವೃದ್ಧಿಗೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಕನ್ನಡಪ್ರಭ ವಾರ್ತೆ ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ), ಎನ್ಬಿಸಿಸಿ (ಇಂಡಿಯಾ) ಲಿಮಿಟೆಡ್‌ ಪ್ರಾಯೋಜಕತ್ವದಲ್ಲಿ ಸುಮಾರು ₹1.21 ಕೋಟಿ ವೆಚ್ಚದ ಮಹತ್ವದ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಮಳೆನೀರು ಕೊಯ್ಲು, ಜಲಾನಯನ ನಿರ್ವಹಣೆ ಹಾಗೂ ಜೈವಿಕ ವೈವಿಧ್ಯ ಸಂರಕ್ಷಣೆ ಮತ್ತು ವೃದ್ಧಿಗೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ.ಈ ಯೋಜನೆಯ ಭಾಗವಾಗಿ, ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ವಿಶ್ವವಿದ್ಯಾಲಯದ ಆವರಣದಲ್ಲಿ ಸಸಿಗಳ ನೆಡುವ ಮೂಲಕ ‘ಪುನರುತ್ಪಾದಕ ಬಹುವಾರ್ಷಿಕ ಜೈವಿಕ ವೈವಿಧ್ಯ ಸಸಿ ನೆಡುವ ಅಭಿಯಾನ’ಕ್ಕೆ ಚಾಲನೆ ನೀಡಿದರು. ಕ್ಯಾಂಪಸ್‌ನ ಹಸಿರು ಹೊದಿಕೆ ವಿಸ್ತರಿಸುವುದು, ಜೈವಿಕ ವೈವಿಧ್ಯ ಹೆಚ್ಚಿಸುವುದು ಹಾಗೂ ಪರಿಸರ ವ್ಯವಸ್ಥೆ ಮತ್ತಷ್ಟು ಬಲಪಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶಗಳು. ಈ ಉಪಕ್ರಮದ ಮೂಲಕ ಸುಸ್ಥಿರ, ಹಸಿರು ಮತ್ತು ಪರಿಸರ ಸ್ನೇಹಿ ಕ್ಯಾಂಪಸ್ ಅಭಿವೃದ್ಧಿಗೆ ವಿಶ್ವವಿದ್ಯಾಲಯವು ತನ್ನ ಬದ್ಧತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದೆ.ಎನ್ಬಿಸಿಸಿ (ಇಂಡಿಯಾ) ಲಿಮಿಟೆಡ್ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ನವೆಂಬರ್ 2024ರಲ್ಲಿ ಮಂಜೂರಾದ ಈ ಯೋಜನೆಯನ್ನು ಪ್ರಧಾನ ಸಂಶೋಧಕರಾಗಿ ಪ್ರೊ. ಚನ್ನವೀರ ಆರ್. ಎಂ. ಮುನ್ನಡೆಸುತ್ತಿದ್ದಾರೆ. ಡಾ.ತೇಜಸ್ವಿ ಲಕ್ಕುಂಡಿ, ಡಾ.ಕವಿಶಂಕರ್ ಗಾವ್ಲಿ ಮತ್ತು ಡಾ. ಎಸ್. ಲಿಂಗಮೂರ್ತಿ ಅವರು ಸಹ-ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಲಪತಿಗಳು ಈ ಯೋಜನೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ.ಯೋಜನೆಯಡಿ ವಿಶ್ವವಿದ್ಯಾಲಯದ ಸುಮಾರು 60 ಎಕರೆ ಪ್ರದೇಶದಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಅಸ್ತಿತ್ವದಲ್ಲಿದ್ದ ತೆರೆದ ಬಾವಿಯ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದ್ದು, ನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಪೂರಕವಾಗಿ ಹೊಸ ಮೇಲ್ಮೈ ಜಲಮೂಲಗಳನ್ನು ನಿರ್ಮಿಸಲಾಗಿದೆ. ಬಹುವಾರ್ಷಿಕ ಸಸ್ಯಗಳಿಗೆ ನೀರುಣಿಸಲು ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರಿಂದ ಜಲಸಂಪನ್ಮೂಲಗಳ ಸಮರ್ಥ ಮತ್ತು ಮಿತವ್ಯಯದ ಬಳಕೆಗೆ ಅನುಕೂಲವಾಗಲಿದೆ.ಯೋಜನೆಯಡಿ ಕೈಗೊಂಡಿರುವ ವಿವಿಧ ಉಪಕ್ರಮಗಳಿಂದ ಉಂಟಾಗುವ ಪರಿಸರ ಮತ್ತು ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಮೌಲ್ಯಮಾಪನ ಮಾಡುವ ಉದ್ದೇಶವನ್ನೂ ಹೊಂದಲಾಗಿದೆ. ವಿಶೇಷವಾಗಿ, ಅಂತರ್ಜಲ ಲಭ್ಯತೆಯ ಹೆಚ್ಚಳ ಹಾಗೂ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಸ್ಥಿರ ಕೃಷಿ ಪದ್ಧತಿಗಳ ಉತ್ತೇಜನದ ಮೇಲೆ ಈ ಯೋಜನೆಯಿಂದ ಉಂಟಾಗುವ ಪರಿಣಾಮಗಳನ್ನು ಅಧ್ಯಯನ ಮಾಡಲಾಗುತ್ತದೆ.ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಭೀಮ ರಾವ್ ಭೋಸಲೆ, ಪ್ರೊ. ಚನ್ನವೀರ ಆರ್. ಎಂ., ಡಾ. ತೇಜಸ್ವಿ ಲಕ್ಕುಂಡಿ, ಡಾ. ಎಸ್. ಲಿಂಗಮೂರ್ತಿ, ಡಾ. ರಾಜಶ್ರೀ, ಸಹಾಯಕ ಕುಲ ಸಚಿವ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ ಶ್ರೀಕಾಂತ್ ಎಮ್ ಕೂಸುರ, ಎಸ್ಟೇಟ್ ಅಧಿಕಾರಿ ಶಿವಕುಮಾರ್ ಸಿರಿಗೇರಿ, ಆನಂದ್, ಮಹಾಂತ ಗೌಡ, ಮಲ್ಲಿಕಾರ್ಜುನ ಸೇರಿದಂತೆ ವಿಶ್ವವಿದ್ಯಾಲಯದ ಇತರ ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಸಸಿ ನೆಡುವ ಅಭಿಯಾನದಲ್ಲಿ ಭಾಗವಹಿಸಿದ್ದರು.