ದೊಡ್ಡಬಳ್ಳಾಪುರ: ಆರೋಗ್ಯಪೂರ್ಣ ಜೀವನದೊಂದಿಗೆ ಪರಿಸರಸ್ನೇಹಿಯಾಗಿ ಕುಡಿಯುವ ನೀರಿನ ಬವಣೆ ತಪ್ಪಿಸಬೇಕಾದರೆ ಮೇಲ್ಛಾವಣಿ ಮಳೆನೀರು ಸಂಗ್ರಹಣೆಯೇ ಶಾಶ್ವತ ಪರಿಹಾರ ಎಂದು ನಾಗದಳ ಸಿ.ನಟರಾಜ್ ಅಭಿಪ್ರಾಯಪಟ್ಟರು

ದೊಡ್ಡಬಳ್ಳಾಪುರ: ಆರೋಗ್ಯಪೂರ್ಣ ಜೀವನದೊಂದಿಗೆ ಪರಿಸರಸ್ನೇಹಿಯಾಗಿ ಕುಡಿಯುವ ನೀರಿನ ಬವಣೆ ತಪ್ಪಿಸಬೇಕಾದರೆ ಮೇಲ್ಛಾವಣಿ ಮಳೆನೀರು ಸಂಗ್ರಹಣೆಯೇ ಶಾಶ್ವತ ಪರಿಹಾರ ಎಂದು ನಾಗದಳ ಸಿ.ನಟರಾಜ್ ಅಭಿಪ್ರಾಯಪಟ್ಟರು.

ನಗರದ ಸ್ವಾಮಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಸುಮಾರು ಒಂದೂವರೆ ಲಕ್ಷ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹಣಾ ಟ್ಯಾಂಕ್‌ಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಳೆನೀರು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಬದುಕಿಗಾಗಿ ಪ್ರಕೃತಿ ನೀಡಿರುವ ಕೊಡುಗೆ. ಮೇಲ್ಚಾವಣಿ ಮೇಲೆ ಬೀಳುವ ಮಳೆಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಸಂರಕ್ಷಿಸಿದರೆ ಬರಗಾಲದಲ್ಲಿಯೂ ನೀರಿನ ಕೊರತೆಯನ್ನು ಸಾಕಷ್ಟು ಮಟ್ಟಿಗೆ ತಪ್ಪಿಸಬಹುದು. ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ವರ್ಷಪೂರ್ತಿ ಕುಡಿಯಲು ಯೋಗ್ಯವಾದ ಪರಿಶುದ್ಧ ನೀರನ್ನು ಪಡೆಯಬಹುದು ಎಂದು ಹೇಳಿದರು.

ಮನೆಯ ಮೇಲ್ಛಾವಣಿಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಂಗ್ರಹಿಸಿದ ಮಳೆನೀರಿಗೆ ಗಾಳಿ ಮತ್ತು ಬೆಳಕು ನೇರವಾಗಿ ತಾಗದಂತೆ ರಕ್ಷಿಸಬೇಕು. ನೀರು ಸಂಗ್ರಹಣಾ ತೊಟ್ಟಿಗೆ ಸೇರುವ ಮೊದಲು ಜಲ್ಲಿ, ಇದ್ದಿಲು ಮತ್ತು ಮರಳಿನಂತಹ ನೈಸರ್ಗಿಕ ಶೋಧಕಗಳ ಮೂಲಕ ಅಥವಾ ಆಧುನಿಕ ಫಿಲ್ಟರ್‌ಗಳ ಮೂಲಕ ಶೋಧಿಸಬೇಕು ಎಂದು ತಿಳಿಸಿದರು.

ಮಳೆ ಕುರಿತು ಮಾಹಿತಿ ನೀಡಿದ ಅವರು, 1 ಸೆಂ.ಮೀ. ಮಳೆ 1 ಚದರ ಮೀಟರ್ ಪ್ರದೇಶದಲ್ಲಿ ಬಿದ್ದರೆ ಸುಮಾರು 10 ಲೀಟರ್ ನೀರು ಲಭ್ಯವಾಗುತ್ತದೆ. ವರ್ಷಕ್ಕೆ 850 ಮಿ.ಮೀ. ಮಳೆಯಾಗುವ ಪ್ರದೇಶದಲ್ಲಿ 1200 ಚದರ ಅಡಿ ನಿವೇಶನದ ಮೇಲೆ ವರ್ಷಕ್ಕೆ ಸುಮಾರು 94,000 ಲೀಟರ್ ಮಳೆನೀರು ಬೀಳುತ್ತದೆ. ಸೂಕ್ತ ವ್ಯವಸ್ಥೆ ಅಳವಡಿಸಿಕೊಂಡರೆ ಅದರಲ್ಲಿ ಅರ್ಧದಷ್ಟಾದರೂ ಶುದ್ಧ ಮಳೆನೀರನ್ನು ಸಂಗ್ರಹಿಸಬಹುದು ಎಂದು ತಿಳಿಸಿದರು.

ಮಳೆನೀರಿನಲ್ಲಿ ಕರಗಿರುವ ಲವಣಾಂಶ ಕಡಿಮೆ ಇರುವುದರಿಂದ ಸೂಕ್ತವಾಗಿ ಸಂಗ್ರಹಿಸಿ ಶೋಧಿಸಿದ ಮಳೆನೀರು ಕುಡಿಯಲು ಅತ್ಯಂತ ಯೋಗ್ಯವಾಗಿದೆ. ನದಿಗಳಲ್ಲಿರುವ ನೀರಿನ ಮೂಲವೂ ಮಳೆನೀರೇ ಆಗಿದೆ. ಮೇಲ್ಚಾವಣಿ ಮಳೆನೀರು ಸಂಗ್ರಹಣಾ ವ್ಯವಸ್ಥೆ ಅಳವಡಿಸಿಕೊಂಡ ಮನೆಗಳಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಸೌಲಭ್ಯವೂ ಇದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಂಕರ ಕಣ್ಣಾಸ್ಪತ್ರೆ ನೀಡುವ ನೇತ್ರದಾನ ಜಾಗೃತಿ ರಾಯಭಾರಿ ಸಹಭಾಗಿತ್ವ ಪ್ರಮಾಣಪತ್ರವನ್ನು ಸಿ.ನಟರಾಜ್ ಹಾಗೂ ಕೆ.ಸಿ.ವೆಂಕಟೇಶ್ ಅವರಿಗೆ ನೀಡಲಾಯಿತು. ವಿದ್ಯಾಸಂಸ್ಥೆಯ ಮುಖ್ಯಸ್ಥ ಎಂ.ಬಿ. ಗುರುದೇವ್, ಬಿ.ಪಿ. ಪ್ರಿಯಾಂಕ, ನೇತ್ರ ತಜ್ಞ ಡಾ. ಕೆ.ವಿ. ಹರೀಶ್, ಡಾ. ಕಾಂತಿಮತಿ, ಡಾ. ಎಚ್.ಪಿ. ಈಶ್ವರ್, ಟಿ.ವಿ. ರವಿ, ಆರ್. ಲಕ್ಷ್ಮೀನಾರಾಯಣ್ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

6ಕೆಡಿಬಿಪಿ1-

ದೊಡ್ಡಬಳ್ಳಾಪುರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮಳೆ ನೀರು ಸಂಗ್ರಹ ತೊಟ್ಟಿಯ ಪೂಜಾ ಕಾರ್ಯಕ್ರಮದಲ್ಲಿ ಸಿ.ನಟರಾಜ್ ಮಾತನಾಡಿದರು. ವಿದ್ಯಾಸಂಸ್ಥೆಯ ಮುಖ್ಯಸ್ಥ ಗುರುದೇವ್, ಪ್ರಿಯಾಂಕ, ಡಾ. ಕೆ.ವಿ.ಹರೀಶ್, ಡಾ. ಕಾಂತಿಮತಿ ಇತರರಿದ್ದರು.