ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಗುಡುಗು-ಸಿಡಿಲಾರ್ಭಟದಿಂದ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಗ್ರಾಮಗಳಲ್ಲಿ ಇರುವ ಹಳ್ಳಕೊಳ್ಳಗಳು ತುಂಬಿಹರಿದ ಪರಿಣಾಮವಾಗಿ ರಸ್ತೆ ಸೇತುವೆಗಳು ಜಲಾವೃತಗೊಂಡಿದೆ. ಇದರಿಂದಾಗಿ ಅನೇಕ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಹಳ್ಳಿಯ ಜನರು ತೊಂದರೆಪಡುವಂತಾಗಿದೆ.ತಾಲೂಕಿನಲ್ಲಿ ಶನಿವಾರ, ಭಾನುವಾರ ಹಗಲು ರಾತ್ರಿ ಸುರಿದ ಮಳೆಯಿಂದಾಗಿ ಪಟಪಳ್ಳಿ, ಅಣವಾರ, ಎಂಪಳ್ಳಿ, ಶಾದೀಪೂರ, ಸಲಗರ ಬಸಂತಪೂರ, ಕನಕಪೂರ, ಲಿಂಗಾನಗರ, ಸಂಗಾಪೂರ ತಾಂಡಾ, ಬೆನಕೆಪಳ್ಳಿ, ರುದನೂರ, ಕೆರೋಳ್ಳಿ, ಗಣಾಪೂರ, ಬಂಟನಳ್ಳಿ, ರಾಯಕೋಡ, ಚಿಂತಪಳ್ಳಿ, ತಾಜಲಾಪೂರ ಗ್ರಾಮಗಳ ಹತ್ತಿರ ಇರುವ ನಾಲಾಗಳು ತುಂಬಿ ಹದಿದ್ದರಿಂದ ಜನರು ಹೊರಗೆ ಹೋಗಲು ಬಾರದಂತಾಯಿತು. ಬೆನಕನಹಳ್ಳಿ ಗ್ರಾಮದ ಪಕ್ಕದ ನಾಲೆ ನೀರು ಮನೆಗೆ ನುಗ್ಗಿದ್ದರಿಂದ ಜನರು ಬೆಚ್ಚಿಬಿದ್ದು ಮನೆಯೊಳಗಿನ ಸಾಮಗ್ರಿಗಳನ್ನು ಬಿಟ್ಟು ಹೊರಗೆ ಮಳೆಯಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ಮನೆಯಲ್ಲಿ ಸಂಗ್ರಹಿಸಿದ್ದ ದವಸ-ಧಾನ್ಯಗಳು ಹಾನಿಗೊಂಡಿವೆ ಎಂದು ಬಿಜೆಪಿ ಮುಖಂಡ ಮಲ್ಲುಗೌಡ ರಾಯಪ್ಪಗೋಳ ತಿಳಿಸಿದ್ದಾರೆ.
ಚಂದ್ರಂಪಳ್ಳಿ-ಮುಲ್ಲಾಮಾರಿ ಜಲಾಶಯಗಳು ಭರ್ತಿ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಂದ್ರಂಪಳ್ಳಿ, ಕೆಳದಂಡೆ ಮುಲ್ಲಾಮಾರಿ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿದ್ದರಿಂದ ಒಳಹರಿವು ಹೆಚ್ಚಾಗಿ ಕೆಳದಂಡೆ ಮುಲ್ಲಾಮಾರಿ, ಚಂದ್ರಂಪಳ್ಳಿ ಜಲಾಶಯದಿಂದ ನೀರು ಹರಿದು ಬಿಡಲಾಗಿದೆ. ಒಳ ಹರಿವು ಹೆಚ್ಚುತ್ತಿದ್ದು ನದಿಪಾತ್ರದ ಜನರು ಎಚ್ಚರಿಂದಿರುವಂತೆ ಚಂದ್ರಂಪಳ್ಳಿ ಜಲಾಶಯ ಎಇಇ ಚೇತನ ಕಳಸ್ಕರ ತಿಳಿಸಿದ್ದಾರೆ.ತೆಲಂಗಾಣ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಮಿರಿಯಾಣ-ಕೊತಲಾಪೂರ ಗ್ರಾಮದಲ್ಲಿ ಭಾರಿ ಮಳೆ ಆಗಿದ್ದರಿಂದ ತೆಲಂಗಾಣ ರಾಜ್ಯದ ತಾಂಡೂರಿಗೆ ರಸ್ತೆ ಸಂಪರ್ಕ ಕಲ್ಪಿಸುವ ಮಿರಿಯಾಣ ಸೇತುವೆ ಮೇಲೆ ಅಪಾರಪ್ರಮಾಣದಲ್ಲಿ ನೀರು ಹರಿದರಿಂದ ತಾಂಡೂರ ಚಿಂಚೋಳಿ ವಾಹನಗಳ ಸಂಚಾರ ನಿಂತು ಹೋಗಿತ್ತು.
ಜಹಿರಾಬಾದ, ಕೊಹಿರ, ಸಂಗಾಪೂರ, ಮಲಚಲಮಾ, ಕುಂಚಾವರಂ ಗಡಿಪ್ರದೇಶದ ಧಾರಕಾರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ಎತ್ತಪೋತ, ಮಾಜಿಕಪುರ ಜಲಧಾರೆ ಮೈದುಂಬಿ ಧುಮ್ಮಿಕ್ಕಿ ಹರಿದಿವೆ. ತಾಲೂಕಿನ ಪಟಳ್ಳಿ ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದರೂ ವ್ಯಕ್ತಿಯೊಬ್ಬ ನೀರಲ್ಲಿ ಕೊಚ್ಚಿಹೋಗುತ್ತಿದ್ದದ್ದನ್ನು ಕಂಡ ಜನರು ಹಗ್ಗದಿಂದ ವ್ಯಕ್ತಿಯನ್ನು ರಕ್ಷಿಸಲಾಗಿದೆ ಎಂದು ಮಲ್ಲಿಕಾರ್ಜುನ ಕೇಶ್ವರ ತಿಳಿಸಿದ್ದಾರೆ.ತುಂಬಿ ಹರಿದ ೧೪ ಸಣ್ಣ ನೀರಾವರಿ ಕೆರೆಗಳು: ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ಧರ್ಮಸಾಗರ, ಲಿಂಗಾನಗರ, ಅಂತಾಪೂರ, ಚಿಕ್ಕನಿಂಗದಳ್ಳಿ ಕೆರೆಗಳು ಭರ್ತಿಯಾಗಿ ಕೋಡಿಗಳಿಂದ ನೀರು ಹರಿಯುತ್ತಿದೆ. ಪಂಗರಗಾ, ದೋಟಿಕೊಳ, ಹುಲಸೂಡ, ಚಂದನಕೇರಾ, ಐನಾಪೂರ, ಮುಕರಂಬಾ, ಚಿಂದಾನೂರ, ಎಲಕಳ್ಳಿಕೆರೆಗಳು ಭರ್ತಿಯಾಗಿ ವೇಸ್ಟವೇರದಿಂದ ನೀರು ಹರಿಯುತ್ತಿವೆ ಇನ್ನು ೭ ಸಣ್ಣಕೆರೆಗಳು ಭರ್ತಿಗೊಳ್ಳುತ್ತಿವೆ ಎಂದು ಎಇ ಅನೀಲಕುಮಾರ ಕಳಸ್ಕರ ತಿಳಿಸಿದ್ದಾರೆ.