ಮುಗಿಯುತ್ತಿದೆ ಮಳೆಗಾಲ, ಒಣಗುತ್ತಿವೆ ಜಲಮೂಲ

| Published : Oct 01 2024, 01:30 AM IST

ಸಾರಾಂಶ

ಈ ವರ್ಷವೂ ಸಹ ಕೆರೆಕಟ್ಟೆಗಳು ತುಂಬುವಂತಹ ಮಳೆ ಬಾರದಿರುವುದರಿಂದ ಮುಂಬರುವ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಬಹುದೆಂದು ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ಈ ವರ್ಷವೂ ಸಹ ಕೆರೆಕಟ್ಟೆಗಳು ತುಂಬುವಂತಹ ಮಳೆ ಬಾರದಿರುವುದರಿಂದ ಮುಂಬರುವ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಬಹುದೆಂದು ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಉತ್ತಮ ಮಳೆಯಾದ ಕಾರಣ ತಾಲೂಕಿನಲ್ಲಿರುವ ಎಲ್ಲಾ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಕೆರೆ ಕಟ್ಟೆಗಳೇ ರೈತರ ಜೀವನಾಡಿಯಾಗಿದ್ದು ಅವು ತುಂಬಿ ಹರಿದರೆ ಮಾತ್ರ ರೈತರು ನೆಮ್ಮದಿಯಿಂದ ಜೀವನ ನಡೆಸಬಹುದಲ್ಲದೆ ಪ್ರಕೃತಿಗೂ ಸೊಬಗು ಬರುವುದು. ಕಲ್ಪತರು ನಾಡಿಗೆ ಕಳೆದ ವರ್ಷವೂ ಸಮರ್ಪಕ ಮಳೆ ಬಾರದೆ ಬರಗಾಲ ಆವರಿಸಿ ಕುಡಿಯುವ ನೀರಿಗೆ ಪರಿತಪಿಸುವಂತಾಯಿತು. ಕೆರೆ ಕಟ್ಟೆಗಳು ಬರಿದಾದರೆ ಅಂತರ್ಜಲ ಬತ್ತಿ ಬೋರ್‌ವೆಲ್‌ಗಳಲ್ಲಿಯೂ ಸಹ ನೀರು ಬಾರದೆ ಮುಂದೇನೂ ಎಂಬ ಚಿಂತೆಯಲ್ಲಿ ರೈತರು ಚಡಪಡಿಸುವಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಈ ವರ್ಷ ಬಿತ್ತನೆಯಾಗಿ ಹುಲುಸಾಗಿ ಬೆಳೆಯುತ್ತಿದ್ದ ರಾಗಿ, ತೊಗರಿ, ಅವರೆ, ಅಲಸಂದೆ, ಹುರುಳಿ ಸೇರಿದಂತೆ ಇತರೆ ಬೆಳೆಗಳು ಕಳೆದ ೨ತಿಂಗಳಿನಿಂದ ಉತ್ತಮ ಮಳೆ ಇಲ್ಲದೆ ಒಣಗುತ್ತಿವೆ. ಬಿತ್ತನೆ ವೇಳೆ ಅಲ್ಪಸ್ವಲ್ಪ ಮಳೆ ಬಂದಿದ್ದು ಬಿಟ್ಟರೆ ಈವರೆಗೂ ಕೆರೆ ಕಟ್ಟೆಗಳು ತುಂಬುವಂತ ಮಳೆಯಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿರುವ ಕೆರೆ ಕಟ್ಟೆಗಳು ನೀರಿಲ್ಲದೆ ಖಾಲಿ ಖಾಲಿಯಾಗಿವೆ. ಜಿಲ್ಲಾ ಪಂಚಾಯತಿಯಡಿ ಬರುವ ೧೨೨ಕೆರೆಗಳಲ್ಲಿಯೂ ನೀರಿಲ್ಲ. ಇನ್ನೂ ಸಣ್ಣ ನೀರಾವರಿ ಇಲಾಖೆಯಡಿ ಬರುವ ೨೪ ಕೆರೆಗಳಲ್ಲಿ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಕೆರೆ ಮಾತ್ರ ಅರ್ಧಭಾಗದಷ್ಟು ಮಳೆ ನೀರಿನಿಂದ ತುಂಬಿದ್ದು ಬಿಟ್ಟರೆ ನೊಣವಿನಕೆರೆ ಕೆರೆಗೆ ಹೇಮಾವತಿ ನೀರು ಹರಿಯುತ್ತಿದ್ದು ಅದು ಸಹ ತುಂಬುವ ಭರವಸೆ ಪೂರ್ಣವಾಗಿ ಇಲ್ಲ. ಒಣಗುತ್ತಿರುವ ತೆಂಗು, ಅಡಿಕೆ

ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ಈಗಾಗಲೇ ಮಳೆ, ಅಂತರ್ಜಲ ಕೊರತೆ ಸೇರಿದಂತೆ ನಾನಾ ರೋಗಗಳಿಗೆ ಈಡಾಗಿ ವಿನಾಶದ ಅಂಚಿಗೆ ತಲುಪಿದೆ.ಹತ್ತಾರು ವರ್ಷಗಳಿಂದ ಬೆಳೆಸಿಕೊಂಡು ಬಂದಿರುವ ತೆಂಗಿನ ಹಾಗೂ ಅಡಕೆ ಮರಗಳಾದರೂ ಉಳಿದುಕೊಂಡರೆ, ಮುಂದೆ ಫಸಲು ಬಿಡಬಹುದೆಂಬ ಆಸೆಯಲ್ಲಿರುವ ಬೆಳೆಗಾರರು ಮಳೆಗಾಗಿ ಮೋಡ ಕವಿಯುತ್ತಿರುವ ಮೋಡಗಳತ್ತ ಮುಖಮಾಡಿ ಪ್ರಾರ್ಥಿಸುತ್ತಿದ್ದಾರೆ. ತಾಲೂಕಿನಲ್ಲಿ ಕೆರೆಕಟ್ಟೆಗಳಲ್ಲಿ ಶೇ.೯೦ರಷ್ಟು ಕೆರೆಕಟ್ಟೆಗಳಲ್ಲಿ ಜಾಲಿ ಮತ್ತಿತರೆ ಮುಳ್ಳುಗಿಡಗಳು ಬೆಳೆದುಕೊಂಡಿವೆ. ಕೆರೆಕಟ್ಟೆಗಳಿಗೆ ನೀರಿನ ಮೂಲಗಳಾಗಿದ್ದ ಹಳ್ಳ ಕೊಳ್ಳಗಳು ಒತ್ತುವರಿಯಾಗಿ ಮಳೆ ನೀರು ಹರಿಯುತ್ತಿಲ್ಲ. ಕೆರೆಕಟ್ಟೆಗಳಿಗೆ ಅಭಿವೃದ್ದಿಯಾಗಿ ದಶಕಗಳೇ ಕಳೆದಿವೆ. ಒಂದು ಕಡೆ ಸರ್ಕಾರ ಕೆರೆಗಳನ್ನು ನಿರ್ಲಕ್ಷಿಸಿದರೆ ಮತ್ತೊಂದು ಕಡೆ ಮಳೆರಾಯ ಮುನಿಸು ತೋರುತ್ತಿದ್ದು ಇದರಿಂದ ಕೃಷಿಕಾಯಕ, ಜನ-ಜಾನುವಾರುಗಳು, ಜಲಚರಗಳು ಸೇರಿದಂತೆ ಪ್ರಕೃತಿಯ ಮೇಲೆ ಕಾರ್ಮೋಡ ಕವಿದಂತಾಗಿದೆ. ಊರಿನ ಕೆರೆ ಕಟ್ಟೆಗಳು ತುಂಬಿದರೆ ಮಾತ್ರವೇ ಜನ ಜಾನುವಾರು ಬದುಕಲು ಸಾಧ್ಯ. ಹೋದ ವರ್ಷವೂ ಸಹ ಮಳೆಯಾಗದೆ ಅಂತರ್ಜಲ ಬತ್ತಿದ್ದು, ಯಾವುದೇ ಕೊಳವೆಬಾವಿಗಳಲ್ಲಿಯೂ ಈ ಹಿಂದಿನಷ್ಟು ನೀರಿಲ್ಲ. ಇದರಿಂದಾಗಿ ತೋಟಗಳು ಒಣಗುತ್ತಿವೆ.

- ರಂಗಪ್ಪ, ರೈತ ತಿಪಟೂರು