ಸಾರಾಂಶ
ಕನಕಪುರ: ತಾಲೂಕಿನ ತೊಪ್ಪಗಾನಹಳ್ಳಿ ರಾಯಸಂದ್ರ ಸರ್ವೇ ನಂ.196ರ ಸರ್ಕಾರಿ ಗೋಮಾಳದಲ್ಲಿದ್ದ ಕೆರೆಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡಿದ್ದ ಕೆರೆ ವಿಸ್ತೀರ್ಣವನ್ನು ಇಲಾಖೆ ಅಧಿಕಾರಿಗಳು ಸರ್ವೆ ಮಾಡಿ ಕೆರೆಯ ಗಡಿಗಳನ್ನು ಗುರುತಿಸಿದರು.
ತೊಪ್ಪಗಾನಹಳ್ಳಿ ಗ್ರಾಮಸ್ಥರು ರಕ್ಷಣಾ ಬೇಲಿ ಹಾಕದಂತೆ ಒತ್ತುವರಿದಾರರಿಗೆ ತಡೆಯೊಡ್ಡಿ, ತಾಲೂಕು ಆಡಳಿತ ಮತ್ತು ಸರ್ವೆ ಇಲಾಖೆಗೆ ದೂರು ನೀಡಿದ್ದರು. ಗ್ರಾಮಸ್ಥರ ದೂರಿನ ಮೇರೆಗೆ ಸರ್ವೆ ಇಲಾಖೆಯ ಮಹೇಶ್ ಮತ್ತು ಸಿಬ್ಬಂದಿರಾಯಸಂದ್ರ ಸರ್ವೆ ಮಾಡಿ 30 ಗುಂಟೆ ಕೆರೆ ಒತ್ತುವರಿ ಜಾಗವನ್ನು ಗುರುತಿಸಿ ಕೆರೆಯ ಸ್ಥಳಕ್ಕೆ ಗಡಿ ಗುರುತಿಸಿದರು. ಗ್ರಾಮಸ್ತರಾದ ರಾಮಚಂದ್ರ, ರಾಜಣ್ಣ, ಶ್ರೀನಿವಾಸ್ ಇತರರು ಮಾತನಾಡಿ, ನಮ್ಮ ಗ್ರಾಮದಲ್ಲಿ ಸರ್ಕಾರಿ ಗೋಮಾಳದಲ್ಲಿದ್ದ ಕೆರೆಯನ್ನು ಬಾಜುದಾರರು ಒತ್ತುವರಿ ಮಾಡಿಕೊಂಡು ತಂತಿ ಬೇಲಿ ಹಾಕಿಕೊಳ್ಳುತ್ತಿದ್ದರು. ಅದನ್ನು ತಡೆದು ಕೆರೆ ಸರ್ವೆ ಮಾಡಿ ರಕ್ಷಣೆ ಮಾಡುವಂತೆ ತಾಲೂಕು ಆಡಳಿತಕ್ಕೆ ಗ್ರಾಮಸ್ಥರೆಲ್ಲರೂ ದೂರು ಸಲ್ಲಿಸಿದ್ದೆವು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಸರ್ವೆ ಮಾಡಿ ಕೆರೆಯ ಗಡಿಯನ್ನು ಗುರುತಿಸಿದ್ದಾರೆ. ಇನ್ನು ಮುಂದೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆಯನ್ನು ಗ್ರಾಮ ಪಂಚಾಯತಿಯಿಂದ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತೇವೆ. ಗ್ರಾಮ ಪಂಚಾಯತಿ ಅಧಿಕಾರಗಳು ಇದಕ್ಕೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಮದ ರಾಮಚಂದ್ರ ದೊಡ್ಡರಾಜು, ನಾಗರಾಜು, ವೆಂಕಟರಾಜು, ರಾಜಣ್ಣ, ರಾಜು ಪುಟ್ಟರಾಮು, ಶ್ರೀನಿವಾಸ್, ಸುನಿಲ್, ಗೋವಿಂದಯ್ಯಇತರರಿದ್ದರು.