ಸಾರಾಂಶ
ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಡೆಂಘೀ, ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳಿಂದ ದೂರವಿರಬೇಕೆಂದು ತಾಲೂಕು ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಡೆಂಘೀ, ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳಿಂದ ದೂರವಿರಬೇಕೆಂದು ತಾಲೂಕು ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ ತಿಳಿಸಿದರು.ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಡೆಂಘೀ ವಿರೋಧಿ ಮಾಸಾಚರಣೆಯಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಓದಿನೊಂದಿಗೆ ಸ್ವಚ್ಛತೆಗೂ ಆದ್ಯತೆ ನೀಡಬೇಕು. ಸೊಳ್ಳೆಗಳಿಂದ ಡೆಂಘೀ, ಚಿಕನ್‌ಗುನ್ಯ, ಆನೆಕಾಲು ರೋಗಗಳು ಬರಲಿವೆ. ಮನೆಗಳಲ್ಲಿ ಸಿಮೆಂಟ್ ತೊಟ್ಟಿಗಳು, ಬ್ಯಾರೆಲ್, ಡ್ರಂ, ಹೂ ಕುಂಡಗಳು, ಮನೆಯ ಸುತ್ತಾಮುತ್ತಲಿನ ಪರಿಸರದಲ್ಲಿ ಬಿಸಾಡಿದ ಒಡೆದ ಬಾಟಲಿ, ಟೈರು, ಪ್ಲಾಸ್ಟಿಕ್, ಗ್ಲಾಸ್, ಎಳೆನೀರಿನ ಚಿಪ್ಪು ಹಾಗೂ ಇತರೆ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾದ ಮಳೆಯ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ ಎಂದರು.
ಮನೆಯಲ್ಲಿರುವ ಎಲ್ಲಾ ನೀರಿನ ಸಂಗ್ರಹ ತಾಣಗಳನ್ನು ಕನಿಷ್ಠ ವಾರಕ್ಕೊಮ್ಮೆ ಖಾಲಿ ಮಾಡಿ, ತೊಳೆದು ಒಣಗಿಸಿ ನೀರನ್ನು ತುಂಬಿಸಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು. ರಾತ್ರಿ ವೇಳೆ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಜ್ವರವಿದ್ದರೆ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆ ಹಾಗೂ ಕುಟುಂಬ ವರ್ಗಕ್ಕೂ ಅರಿವು ಮೂಡಿಸಬೇಕು. ಆದ್ದರಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ಉಪನ್ಯಾಸಕ ಡಾ. ಕೆ; ಲೋಕೇಶ್, ಆರೋಗ್ಯ ಸಿಬ್ಬಂದಿ ರಾಧಾ ಮತ್ತಿತರರಿದ್ದರು. ನಂತರ ವಿದ್ಯಾರ್ಥಿಗಳು ತಮ್ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.