ಸಾರ್ವಜನಿಕರು ಬ್ಯಾಂಕಿಂಗ್ ವಂಚನೆಗಳ ಕುರಿತು ಜಾಗೃತರಾಗಿ, ಸುರಕ್ಷಿತವಾಗಿ ಹಣಕಾಸು ವ್ಯವಹಾರಗಳನ್ನು ನಡೆಸುವ ಕುರಿತಂತೆ ಎಲ್ಲಾ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಅರಿವು ಮೂಡಿಸಬೇಕು.

ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮದ ಕುರಿತ ಭಿತ್ತಿಪತ್ರ ಬಿಡುಗಡೆ

ಕನ್ನಡಪ್ರಭ ವಾರ್ತೆ ಕಾರವಾರ

ಸುರಕ್ಷಿತವಾಗಿ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸುವ ಬಗ್ಗೆ ಮತ್ತು ಹಣಕಾಸು ಸಾಕ್ಷರತೆ ಹಾಗೂ ಕೆವೈಸಿ ಕುರಿತು ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಸೂಚಿಸಿದರು.

ಫೆಬ್ರವರಿ 13ರ ವರೆಗೆ ನಡೆಯುವ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮದ ಕುರಿತ ಭಿತ್ತಿಪತ್ರಗಳನ್ನು ಜಿಪಂ ಸಭಾಂಗಣದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ಸಾರ್ವಜನಿಕರು ಬ್ಯಾಂಕಿಂಗ್ ವಂಚನೆಗಳ ಕುರಿತು ಜಾಗೃತರಾಗಿ, ಸುರಕ್ಷಿತವಾಗಿ ಹಣಕಾಸು ವ್ಯವಹಾರಗಳನ್ನು ನಡೆಸುವ ಕುರಿತಂತೆ ಎಲ್ಲಾ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಅರಿವು ಮೂಡಿಸಬೇಕು. ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಆನ್‌ಲೈನ್ ವಂಚನೆಗಳ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದರು.

ಎಲ್ಲಾ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ, ಯೋಜನೆಗಳಿಗೆ ನೋಂದಾವಣೆ ಮಾಡುವಂತೆ ತಿಳಿಸಿದ ಅವರು, ಈಗಾಗಲೇ ಈ ಯೋಜನೆಯಲ್ಲಿ ನೋಂದಣಿ ಮಾಡಿ, ಆಕಸ್ಮಿಕವಾಗಿ ಅಪಘಾತದಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ ಈ ಯೋಜನೆಯು ಅತ್ಯಂತ ಉಪಯುಕ್ತವಾದ ನೆರವು ನೀಡಿದ್ದು, ಅತ್ಯಂತ ಕಡಿಮೆ ಮೊತ್ತದ ಈ ವಿಮಾ ಯೋಜನೆಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ವೈಯಕ್ತಿಕವಾಗಿ ಗಮನಹರಿಸಿ ನೋಂದಣಿ ಮಾಡಿಸುವಂತೆ ನಿರ್ದೇಶನ ನೀಡಿದರು.

ಕೃಷಿ ಇಲಾಖೆಯ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಆರಂಭಿಸಲು ಸಾಲ ನೀಡಲು ವಿಳಂಬವಾಗದಂತೆ ಶೀಘ್ರದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿ, ಸಾಲಗಳನ್ನು ವಿತರಿಸಬೇಕು. ಸಾಲ ವಿತರಣೆಗೆ ಅಗತ್ಯವಿರುವ ನಿರಾಪೇಕ್ಷಣಾ ಪತ್ರ ನೀಡಲು ಇರುವ ತೊಂದರೆಗಳನ್ನು ನಿವಾರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈಗಾಗಲೇ ಸಾಲ ಮಂಜೂರಾಗಿದ್ದರೆ ಅಥವಾ ಸಾಲದ ಅರ್ಜಿ ತಿರಸ್ಕೃತವಾಗಿದ್ದರೆ ಸದ್ರಿ ಮಾಹಿತಿಯನ್ನು ಪೋರ್ಟಲ್ ನಲ್ಲಿ ಅಳವಡಿಸುವಂತೆ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮೃತರಾದ ನಂತರವೂ ಅವರ ಖಾತೆಗಳಿಗೆ ಹಣೆ ಜಮೆ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ಆನಂದ್ ಸಾ ಹಬೀಬ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗರಾಜ ನಾಯಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಬ್ಯಾಂಕ್‌ಗಳು ಪ್ರತಿನಿಧಿಗಳು ಇದ್ದರು.