ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಗ್ಲಾಕೋಮಾ ಸಪ್ತಾಹವನ್ನು ಮಾ.15ರ ವರೆಗೆ ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ನೇತ್ರ ತಪಾಸಣೆ ನಡೆಸಲಾಯಿತು.ಗ್ಲಾಕೋಮಾ ಸಮಸ್ಯೆಯುಳ್ಳವರಿಗೆ ಅಗತ್ಯ ಚಿಕಿತ್ಸೆ ಸಲಹೆ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಗ್ಲಾಕೋಮಾ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ ಎಂದು ಸರ್ಕಾರಿ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ತಿಳಿಸಿದರು.
ದೃಷ್ಟಿ ಕದಿಯುವ ಕಾಯಿಲೆ:ಶುಕ್ರವಾರ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಗ್ಲಾಕೋಮಾ ಸಪ್ತಾಹದ ಅಂಗವಾಗಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಗ್ಲಾಕೋಮಾವು ಯಾವುದೇ ರೋಗ ಲಕ್ಷಣಗಳಿಲ್ಲದೆ ದೃಷ್ಟಿ ಕದಿಯುವ ಕಾಯಿಲೆಯಾಗಿದ್ದು, ಗ್ಲಾಕೋಮಾದಲ್ಲಿ ಕಣ್ಣಿನೊಳಗಿನ ಒತ್ತಡವು ಹೆಚ್ಚಾಗುವುದರಿಂದ ಕಣ್ಣಿನ ಆಪ್ಟಿಕ್ ನರಗಳು ಹಾನಿಗೊಳ್ಳುತ್ತವೆ. ಆದ್ದರಿಂದ ಇದರ ಶೀಘ್ರ ಪತ್ತೆ ಹಾಗೂ ಸೂಕ್ತ ಚಿಕಿತ್ಸೆ ಪಡೆಯುವುದು ಅವಶ್ಯಕವಾಗಿರುತ್ತದೆ ಎಂದು ಹೇಳಿದರು. ನೇತ್ರ ತಜ್ಞ ಡಾ.ಜೆ.ಬಿ,ಮಹೇಶ್ ಮಾತನಾಡಿ, ಮಧುಮೇಹ, ರಕ್ತದೊತ್ತಡ ಹಾಗೂ ಸಮೀಪ ದೃಷ್ಟಿದೋಷವಿರುವವರಲ್ಲಿ ಗ್ಲಾಕೋಮಾ ಆಗುವ ಸಂಭವ ಹೆಚ್ಚು. ಪದೇ ಪದೇ ಕನ್ನಡಕದ ಸಂಖ್ಯೆ ಬದಲಾಯಿಸಬೇಕಾಗಿದ್ದಲ್ಲಿ ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಕ್ಕೆ ಕರೆ ಮಾಡಬಹುದೆಂದು ತಿಳಿಸಿದರು.
ಈ ವೇಳೆ ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ. ಶಿವಕುಮಾರ್, ಡಿ.ಎಚ್.ಓ ಡಾ.ಮಹೇಶ್ ಕುಮಾರ್, ಜಿಲ್ಲಾಶಸ್ತ್ರ ಚಿಕಿತ್ಸಕಿ ಡಾ. ಮಂಜುಳಾದೇವಿ, ನೇತ್ರ ತಜ್ಞೆ ಡಾ.ರಮ್ಯ, ನೇತ್ರಾಧಿಕಾರಿ ಜಯಪ್ರಕಾಶ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಇದ್ದರು.