ಮುಟ್ಟಿನ ನೈರ್ಮಲ್ಯದ ಕುರಿತು ಜಾಗೃತಿ ವಹಿಸಿ: ಡಾ. ಶಂಕರ್ ನಾಯಕ್

| Published : May 29 2024, 12:50 AM IST

ಸಾರಾಂಶ

ಜಿಲ್ಲಾ ಆರ್‌ಸಿಎಚ್ ಡಾಕ್ಟರ್ ಜಂಬಯ್ಯ ಮಾತನಾಡಿ, ಕಿಶೋರಿಯರು ಮತ್ತು ಮಹಿಳೆಯರು ಮುಟ್ಟಿನ ವೈಯಕ್ತಿಕ ಕಾಳಜಿ ವಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನು ಮಂಗಳವಾರ ಆಚರಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಂಕರ್ ನಾಯಕ್ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ಕಿಶೋರಿಯಿಂದ ಮಹಿಳೆಯರು ತಮ್ಮ ಮುಟ್ಟಿನ ನೈರ್ಮಲ್ಯದ ಕುರಿತು ಜಾಗೃತಿ ವಹಿಸಬೇಕು. ವೈಯಕ್ತಿಕ ಸ್ವಚ್ಛತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ನೈರ್ಮಲ್ಯದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಜಿಲ್ಲಾ ಆರ್‌ಸಿಎಚ್ ಡಾಕ್ಟರ್ ಜಂಬಯ್ಯ ಮಾತನಾಡಿ, ಕಿಶೋರಿಯರು ಮತ್ತು ಮಹಿಳೆಯರು ಮುಟ್ಟಿನ ವೈಯಕ್ತಿಕ ಕಾಳಜಿ ವಹಿಸಬೇಕು. ಸಂತಾನೋತ್ಪತ್ತಿ, ಆರೋಗ್ಯ ಪೌಷ್ಟಿಕ ಆಹಾರ, ಯೋಗ ಧ್ಯಾನ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಮುಟ್ಟಿನಲ್ಲಿ ವ್ಯತ್ಯಾಸವಾದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ಆಪ್ತ ಸಮಾಲೋಚನೆಯನ್ನು ತೆಗೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಜಿಲ್ಲಾ ಡಿಎಂಓ ಅಧಿಕಾರಿ ಡಾಕ್ಟರ್ ಕಮಲಮ್ಮ ಮುಟ್ಟಿನ ನೈರ್ಮಲ್ಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಆರ್‌ಸಿಎಚ್ ಸಿಬಂದಿ, ಆರೋಗ್ಯ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ತುಂಗಭದ್ರಾ ಸ್ಕೂಲ್ ಆಫ್ ನರ್ಸಿಗ್ ಹೋಮ್ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂಪಿ ದೊಡ್ಡಮನಿ ನಿರೂಪಿಸಿದರು. ಧರ್ಮನಗೌಡ ವಂದಿಸಿದರು.