ಸಾರಾಂಶ
ರಸಗೊಬ್ಬರ ಅಭಾವಕ್ಕೆ ಕಾರಣರಾದ ಕಾಳಸಂತೆಕೋರರ ವಿರುದ್ಧ ಕ್ರಮ ಕೈಗೊಂಡು, ನ್ಯಾನೊ ಯೂರಿಯಾ ಕುರಿತಂತೆ ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಘಟಕ ಒತ್ತಾಯಿಸಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ರಸಗೊಬ್ಬರ ಅಭಾವಕ್ಕೆ ಕಾರಣರಾದ ಕಾಳಸಂತೆಕೋರರ ವಿರುದ್ಧ ಕ್ರಮ ಕೈಗೊಂಡು, ನ್ಯಾನೊ ಯೂರಿಯಾ ಕುರಿತಂತೆ ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಘಟಕ ಒತ್ತಾಯಿಸಿದೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ, ನಮ್ಮ ಜಿಲ್ಲೆಗೆ 2170 ಮೆಟ್ರಿಕ್ ಟನ್ ರಸಗೊಬ್ಬರ ಬರುತ್ತಿದೆ. ಇನ್ನು 600 ಮೆಟ್ರಿಕ್ ಟನ್‌ಗೂ ಅಧಿಕ ಯೂರಿಯಾ ಅಂಗಡಿ, ಸೊಸೈಟಿಗಳ ಮೂಲಕ ರೈತರಿಗೆ ಸದ್ಯವೇ ಪೂರೈಕೆ ಆಗಲಿದೆ ಎಂದರು.
ಯೂರಿಯಾ ಗೊಬ್ಬರ ಖರೀದಿ ವೇಳೆ ನ್ಯಾನೋ ಯೂರಿಯಾ, ಕಳೆನಾಶಕ, ಕ್ರಿಮಿನಾಶಕ, ಬೂಸ್ಟರ್, ಜಿಂಕ್‌ಗಳನ್ನು ಲಿಂಕ್ ಮಾಡಿ, ಖರೀದಿಸುವಂತೆ ರೈತರಿಗೆ ಯಾವುದೇ ಕಾರಣಕ್ಕೂ ಒತ್ತಾಯಿಸುವಂತಿಲ್ಲ. ಲಿಂಕ್ ಗೊಬ್ಬರದಂತೆ ಬಲವಂತ ಮಾಡುವವರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಮೊದಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸರ್ಕಾರದ ಸಬ್ಸಿಡಿ ಹೊರತುಪಡಿಸಿ, ಯೂರಿಯಾ ಗೊಬ್ಬರದ 1 ಪ್ಯಾಕೆಟ್ ಬೆಲೆ ₹266.50 ಇದೆ. ಲಾರಿ ಬಾಡಿಗೆ, ಹಮಾಲಿ ಸೇರಿದಂತೆ ಇತರೆ ಖರ್ಚು ಸೇರಿಸಿದರೂ ಗೊಬ್ಬರದ ಗರಿಷ್ಟ ಬೆಲೆ ₹300 ದಾಟುವುದಿಲ್ಲ. ಇದಕ್ಕಿಂತಲೂ ಹೆಚ್ಚಿನ ಬೆಲೆ ಮಾರಾಟ ಮಾಡುವವರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಕೃಷಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ 180 ಸೊಸೈಟಿಗಳಿಗೂ ಸಮರ್ಪಕ ರಸಗೊಬ್ಬರ ಒದಗಿಸಬೇಕು. ನ್ಯಾನೊ ದ್ರವ ಯೂರಿಯಾದಿಂದ ರೈತರಿಗೆ ಹಣ ಉಳಿತಾಯವಾಗುವ ಜೊತೆಗೆ ಇಳುವರಿಯೂ ಹೆಚ್ಚುತ್ತದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಿದರೆ ಮುಂದಿನ ದಿನಗಳಲ್ಲಿ ಯೂರಿಯಾ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು. ಸರ್ಕಾರ ಈ ಬಗ್ಗೆ ಗಮನ ಹರಿಸಲಿ ಎಂದು ತಿಳಿಸಿದರು.ಸಂಘಟನೆಯ ಎಸ್.ವಿ.ನಾಗರಾಜ, ನವೀನ, ಶಿವಕುಮಾರ, ಸಿದ್ದು, ಪ್ರಸನ್ನಕುಮಾರ ಇತರರು ಇದ್ದರು.
- - --29ಕೆಡಿವಿಜಿ4.ಜೆಪಿಜಿ: ದಾವಣಗೆರೆಯಲ್ಲಿ ಮಂಗಳವಾರ ರೈತ ಸಂಘದ ತಾಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.