ಹಾವೇರಿ: ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ಪೋಕ್ಸೋ ಪ್ರಕರಣ ತಡೆಗೆ ಎಲ್ಲರೂ ತಂಡವಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜೊತೆಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಗಳ ಶಿಕ್ಷೆ ಕುರಿತು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ 2025-26ನೇ ಸಾಲಿನ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಪ್ರಗತಿ ಪರಿಶೀಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಿಕ್ಷೆ ಬಗ್ಗೆ ಅರಿವು ಮೂಡಿಸಿ: ವಿವಾಹಗಳು ತುರ್ತಾಗಿ ನಡೆಯುವುದಿಲ್ಲ, ಪೂರ್ವ ನಿಯೋಜಿತವಾಗಿರುತ್ತವೆ. ಹಾಗಾಗಿ ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಶಾಲಾ ಮುಖ್ಯಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಬಾಲ್ಯ ವಿವಾಹಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಬಾಲ್ಯ ವಿವಾಹ ನಡೆದರೆ ತಪ್ಪಿತಸ್ಥರಿಗೆ ಆಗುವ ಶಿಕ್ಷೆ ಬಗ್ಗೆ ಅರಿವು ಮೂಡಿಸಬೇಕು. ಶಾಲೆ ತೊರೆದ ಹಾಗೂ ಕಾಣೆಯಾದ ಬಾಲಕಿಯರ ಕುರಿತು ವಿವರ ತಿಳಿದುಕೊಳ್ಳಬೇಕು. ತಳಹಂತದಿಂದಲೇ ಎಲ್ಲರೂ ಚುರುಕಾಗಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.ಕೇಂದ್ರಸ್ಥಾನದಲ್ಲಿರಬೇಕು:ಬರುವ ಅಕ್ಷಯ ತೃತೀಯ ದಿನದಂದು ಎಲ್ಲರೂ ಬಹಳ ಜಾಗರೂಕರಾಗಿರಬೇಕು. ಕೇಂದ್ರ ಸ್ಥಾನದಲ್ಲಿದ್ದು, ಯಾವುದೇ ಬಾಲ್ಯ ವಿವಾಹಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಬಾಲ್ಯ ವಿವಾಹ ನಿಷೇಧ ಕುರಿತು ಗ್ರಾಮಗಳಲ್ಲಿ ಮುಂಚಿತವಾಗಿ ಡಂಗೂರ ಸಾರಬೇಕು. ಒಂದು ವೇಳೆ ಇಂತಹ ಪ್ರಕರಣಗಳು ನಡೆದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಮಾರ್ಗಸೂಚಿ ಅನುಸಾರ ಕೆಲಸಮಾಡಿ: ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳು ಹಾಗೂ ಬಾಲ ಗರ್ಭಿಣಿಯರ ಪ್ರಕರಣಗಳು ನಡೆಯುತ್ತಿರುವುದು ವಿಷಾದನೀಯ. ಎಲ್ಲರೂ ಕಾನೂನಿನಡಿ ಮಾರ್ಗಸೂಚಿ ಅನುಸಾರ ಕೆಲಸ ಮಾಡಿ. ಮಕ್ಕಳು ಬಾಲ್ಯದಲ್ಲೇ ಸರಿದಾರಿಯಲ್ಲಿ ನಡದರೆ ಮುಂದೆ ಅವರ ಭವಿಷ್ಯ ಉತ್ತಮವಾಗುತ್ತದೆ. ಎಲ್ಲರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ಬಹಳ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಅದನ್ನು ಅರಿತು ಕೆಲಸಮಾಡಬೇಕು ಎಂದು ಸೂಚನೆ ನೀಡಿದರು.ಜಿಪಂ ಸಿಇಒ ರುಚಿ ಬಿಂದಲ್ ಮಾತನಾಡಿ, ಅಕ್ಷಯ ತೃತೀಯ ದಿನದಂದು ಎಲ್ಲರೂ ಬಹಳ ನಿಗಾವಹಿಸಬೇಕು. ಯಾವುದೇ ಬಾಲ್ಯ ವಿವಾಹ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ 18 ವರ್ಷದೊಳಗಿನ ಲೈನ್ ಲಿಸ್ಟ್ ಮಾಡಬೇಕು ಹಾಗೂ ಕಡ್ಡಾಯವಾಗಿ ಕಾವಲು ಸಮಿತಿ ಮಾಡಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಮಾತನಾಡಿ, ಪದವಿ ಪೂರ್ವ ಕಾಲೇಜುಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಆಯೋಜಿಸುವ ಅರಿವು ಹಾಗೂ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಿದರೆ, ಕಾಯ್ದೆಗಳ ಕುರಿತು ಅರಿವು ಮೂಡಿಸಲಾಗುವುದು. ಗ್ರಾಮ ಮಟ್ಟದ ಕಾರ್ಯಕ್ರಮಗಳಿಗೆ ಮನೆ ಮನೆ ಪೊಲೀಸ್ ಕಾರ್ಯಕ್ರಮದಡಿ ಪ್ರತಿ ಗ್ರಾಮಗಳಲ್ಲಿ ಬೀಟ್‌ಗಳು ಹಾಜರಾಗುತ್ತಾರೆ ಎಂದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ ಮಾತನಾಡಿ, 2025-26ನೇ ಸಾಲಿನಲ್ಲಿ ಒಟ್ಟು 46 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ಈ ಪೈಕಿ 10 ಜನ ಬಾಲಕಿಯರು ವಿದ್ಯಾಭ್ಯಾಸ ಮುಂದುವರೆಸಿದ್ದಾರೆ ಹಾಗೂ 36 ಜನ ಬಾಲಕಿಯರು ಮನೆ ಕೆಲಸ, ಟೈಲರಿಂಗ್ ಮತ್ತು ಕರಕುಶಲ ತರಬೇತಿ ಪಡೆಯುತ್ತಿದ್ದಾರೆ. ಪೋಕ್ಸೋ ಪ್ರಕರಣದೊಂದಿಗೆ 28 ಬಾಲ್ಯವಿವಾಹಗಳು ನಡೆದಿವೆ. ಆರ್‌ಸಿಎಚ್ ವರದಿ ಅನುಸಾರ 42 ಬಾಲಗರ್ಭಿಣಿಯರ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 34 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ 18 ವರ್ಷ ಮೀರಿದ್ದಾರೆ. ಎಸ್‌ಜೆಪಿಯು ವರದಿ ಅನುಸಾರ 107 ಪೋಕ್ಸೋ ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೇವತಿ ಹೊಸಮಠ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇದ್ದರು.ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮೂಡಿಸಿ
ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ಪೋಕ್ಸೋ ಪ್ರಕರಣ ತಡೆಗೆ ಎಲ್ಲರೂ ತಂಡವಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜೊತೆಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಗಳ ಶಿಕ್ಷೆ ಕುರಿತು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.