ಮಕ್ಕಳ ಕಾನೂನು ಕುರಿತು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಲಿ: ನ್ಯಾ. ಪರಶುರಾಮ ದೊಡ್ಡಮನಿ

| Published : Mar 08 2025, 12:33 AM IST

ಮಕ್ಕಳ ಕಾನೂನು ಕುರಿತು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಲಿ: ನ್ಯಾ. ಪರಶುರಾಮ ದೊಡ್ಡಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಶಾಲೆಯಲ್ಲಿ ಪ್ರಾರ್ಥನೆ ಸಮಯದಲ್ಲಿ ಪೋಕ್ಸೊ ಹಾಗೂ ಬಾಲ್ಯ ವಿವಾಹಗಳ ಕುರಿತು ಕಡ್ಡಾಯವಾಗಿ ಅರಿವು ಮೂಡಿಸಬೇಕು ಎಂದು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಹೇಳಿದರು.

ಧಾರವಾಡ: ಮಕ್ಕಳ ಕಾನೂನುಗಳ ಕುರಿತು ಎಲ್ಲ ಶಾಲೆ-ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯವಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಹೇಳಿದರು.

ಮಕ್ಕಳ ರಕ್ಷಣಾ ನಿರ್ದೇಶನಾಲಯ ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳ ಸಹಕಾರದಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಗೆ, ವಸತಿ ನಿಲಯದ ನಿಲಯ ಪಾಲಕರಿಗೆ ಮಕ್ಕಳ ರಕ್ಷಣೆಗಾಗಿ ಇರುವ ಕಾನೂನು ಕುರಿತು ಆಲೂರು ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.ವಿವಿಧ ಕಾನೂನುಗಳ ಕುರಿತು ಹಲವಾರು ಬಾರಿ ಜಾಗೃತಿ ಮೂಡಿಸಿದರೂ ಪೋಕ್ಸೋ ಪ್ರಕರಣಗಳು ಮತ್ತು ಶಾಲೆ ಬಿಟ್ಟ ಮಕ್ಕಳು ಇನ್ನೂ ಇದ್ದಾರೆ. ಆದ್ದರಿಂದ ಯಾವುದೇ ಮಕ್ಕಳ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಸರ್ಕಾರದ ಇಲಾಖೆಗಳ ಅಧಿಕಾರಿಗಳು ಪೊಲೀಸ್‌ ಠಾಣೆಗಳಲ್ಲಿ ಎಫ್‍ಐಆರ್ ದಾಖಲಿಸಬೇಕು ಎಂಬ ಸಲಹೆ ನೀಡಿದರು.

ಪ್ರತಿ ಶಾಲೆಯಲ್ಲಿ ಪ್ರಾರ್ಥನೆ ಸಮಯದಲ್ಲಿ ಪೋಕ್ಸೊ ಹಾಗೂ ಬಾಲ್ಯ ವಿವಾಹಗಳ ಕುರಿತು ಕಡ್ಡಾಯವಾಗಿ ಅರಿವು ಮೂಡಿಸಬೇಕು. ಎಲ್ಲರೂ ಪ್ರೀತಿ ಸೌಹಾರ್ದತೆಯಿಂದ ಇರಬೇಕು ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮಣಿ ಮಾತನಾಡಿ, ಸಮಾಜದ ಉತ್ತಮ ಬೆಳವಣಿಗೆಗೆ ಸಾಕಷ್ಟು ಕಾನೂನುಗಳಿವೆ. ಅವುಗಳು ಸರಿಯಾಗಿ ಅನುಷ್ಠಾನವಾಗಬೇಕು. ಕಾನೂನುಗಳನ್ನು ಅನುಷ್ಠಾನಗೊಳಿಸುವಲ್ಲಿ ಕೇವಲ ಪೊಲೀಸರ ಪಾತ್ರವಲ್ಲದ್ದೇ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಿದೆ. ತೆರೆದ ಮನೆ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ವಿವಿಧ ಕಾನೂನು ಅರಿವನ್ನು ನೀಡುತ್ತಿದ್ದೇವೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಪ್ರಭಾರಿ ಉಪನಿರ್ದೇಶಕ ಡಾ. ಕಮಲಾ ಬೈಲೂರ, ಮಕ್ಕಳನ್ನು ರಕ್ಷಿಸುವಲ್ಲಿ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಪಾತ್ರವಲ್ಲದೇ ಎಲ್ಲ ಇಲಾಖೆಯ ಸಹಕಾರದೊಂದಿಗೆ ಮಕ್ಕಳ ರಕ್ಷಣೆಯಾಗಬೇಕು. ಮಕ್ಕಳು ಹೆಚ್ಚು ಸಮಯ ಶಾಲೆಯಲ್ಲೇ ಕಳೆಯುತ್ತಿದ್ದು, ಶಿಕ್ಷಕರಿಗೆ ವಿಶೇಷ ಗೌರವವನ್ನು ನೀಡುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಎಂದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರಾಜೇಶ್ವರಿ ಸಾಲಗಟ್ಟಿ ಮಾತನಾಡಿದರು. ಹರೀಶ ಜೋಗಿ ಉಪನ್ಯಾಸ ನೀಡಿದರು. ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಸ್ವಾಗತಿಸಿದರು. ಜಿಪಂ ಸಹಾಯಕ ಕಾರ್ಯದರ್ಶಿ ಅಜಯ ಎನ್., ಎಸ್.ಎನ್. ಹುಡೇದಮನಿ, ಮಹ್ಮದಅಲಿ ತಹಶೀಲ್ದಾರ, ಕರೆಪ್ಪ ಕೌಜಲಗಿ ಇದ್ದರು.