ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಜೀವನ ಹಣೆಬರಹದ ಮೇಲೆ ನಿಲ್ಲದೇ ಅದು ನಮ್ಮ ಹಣೆಬೆವರಿನ ಮೇಲೆ ನಿಂತಿದೆ. ಸಾಧನೆ ಯಾರೂ ಬೇಕಾದರೂ ಮಾಡಬಹುದು. ತಾವು ಮಾಡುವ ಕೆಲಸದ ಬಗ್ಗೆ ಕೀಳರಿಮೆ ತಾಳದೇ ತಮ್ಮ ಕೆಲಸವನ್ನು ತೃಪ್ತಿಯಿಂದ ಮಾಡಿದರೆ ಸಾಧನೆ ಮಾಡಲು ಸಾಧ್ಯ ಎಂದು ವೈದ್ಯಭೂಷಣ ಪ್ರಶಸ್ತಿ ಪುರಸ್ಕ್ರತ, ಭಾಷಣಕಾರ ಡಾ.ರಾಹುಲ್ ದೇವರಾಜ ಹೇಳಿದರು.ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ನಂದಿ ಶಿಕ್ಷಣ ಸಂಸ್ಥೆಯ ನಂದಿ ಪ್ರಾಥಮಿಕ ಮತ್ತು ಪ್ರೌಢಶಾಲೆ (ಆಂಗ್ಲ ಮತ್ತು ಕನ್ನಡ ಮಾಧ್ಯಮ) ಹಾಗೂ ನಂದಿ ಸಂಸ್ಕ್ರತ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದ ಅವರು, ಮಕ್ಕಳಿಗೂ ಯಾವುದರಲ್ಲಿ ಕುಗ್ಗದಂತೆ ಬೆಳೆಸಬೇಕು. ಜೀವನದಲ್ಲಿ ಕಷ್ಟ ಇರುತ್ತದೆ. ಇದನ್ನು ಜಯಿಸಬೇಕು. ಮಕ್ಕಳಲ್ಲಿ ಸದೃಢ ವರ್ತನೆ ಬೆಳೆಸಿ, ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ನೀಡಬೇಕು. ದೊಡ್ಡವರಿಗೆ ಗೌರವ ಕೊಡುವುದನ್ನು ಕಲಿಸಬೇಕೆಂದರು.
ಜಗತ್ತಿನಲ್ಲಿ ಸಂಪತ್ತನ್ನು ಕಳ್ಳರು ಕದಿಯುತ್ತಾರೆ. ಅದೇ ನಮ್ಮಲ್ಲಿರುವ ವಿದ್ಯೆ ಯಾರೂ ಕಲಿಯಲು ಸಾಧ್ಯವಿಲ್ಲ. ಇಂತಹ ಅಮೂಲ್ಯ ವಿದ್ಯೆ ಮಕ್ಕಳಿಗೆ ಕಲಿಸುವಂತಾಗಬೇಕು. ದುಡ್ಡಿನ ಹಿಂದೆ ನಾವು ಹೋಗದೆ ದುಡ್ಡು ನಮ್ಮನ್ನು ಹುಡುಕಿಕೊಂಡು ಬರುವಂತಹ ಕೌಶಲ್ಯ ಕಲಿಸುವಂತಾಗಬೇಕು. ಪಾಲಕರು, ಮಕ್ಕಳು ಯಾವುದೇ ದುಶ್ಚಟಗಳಿಗೆ ಒಳಗಾದಂತೆ ನೋಡಿಕೊಂಡು, ಅವರು ಯಾವ ಕ್ಷೇತ್ರದಲ್ಲಿ ಆಸಕ್ತಿ ತಾಳುತ್ತಾರೋ ಅವರಿಗೆ ಅದರಲ್ಲಿ ಅವಕಾಶ ನೀಡಬೇಕು. ನಗುವೇ ಜೀವನದ ಪರಮಔಷಧಿಯಾಗಿದೆ. ಇದರಿಂದ ಜೀವನದಲ್ಲಿರುವ ಎಲ್ಲ ಸಮಸ್ಯೆಗಳು ಕಳೆದುಕೊಳ್ಳಲು ಸಾಧ್ಯ ಎಂದರು.ನಂದಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ನಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಇದಕ್ಕೆ ಪಾಲಕರ ಸಹಕಾರ ಬಹಳ ಮುಖ್ಯ. ಮಕ್ಕಳ ಮುಂದೆ ಶಿಕ್ಷಕರನ್ನು ಎಂದಿಗೂ ಪಾಲಕರು ಸಣ್ಣವರನ್ನಾಗಿಸಬಾರದು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ, ಪಾಲಕರ ಪಾತ್ರ ಪ್ರಮುಖವಾಗಿದೆ ಎಂದರು.
ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ನಮಗೆ ಜನ್ಮಕೊಟ್ಟ ತಂದೆ-ತಾಯಿ ಮೊದಲ ಗುರು, ಶಿಕ್ಷಕರು ಎರಡನೇ ಗುರು. ಸನ್ಮಾರ್ಗದಲ್ಲಿ ನಡೆಸುವ ಮಠ-ಮಾನ್ಯಗಳ ಪೂಜ್ಯರು ಮೂರನೇ ಗುರುವಾಗಿದ್ದಾರೆ. ಸಮಾಜಕ್ಕೆ ಈ ಮೂರು ಗುರುಗಳ ಕೊಡುಗೆ ಮರೆಯುವಂತಿಲ್ಲ. ಮೂಢನಂಬಿಕೆಗಳಿಗೆ ಆದ್ಯತೆ ನೀಡದೇ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿರುವ ಅನುದಾನ ರಹಿತ ಶಾಲೆಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿರುವ ಅನುದಾನ ರಹಿತ ಶಾಲೆಗಳ ಸಂಘದ ಜಿಲ್ಲಾಧ್ಯಕ್ಷ, ನಂದಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪೂಜಾರಿ ಕಾರ್ಯ ಶ್ಲಾಘನೀಯ ಎಂದರು.ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿದ್ದ ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬಸವರಾಜ ಹಾರಿವಾಳ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕ್ರತ ಲೋಕನಾಥ ಅಗರವಾಲ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಿವನಗೌಡ ಬಿರಾದಾರ, ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ಮುಖ್ಯಗುರು ವೀಣಾ ಪೂಜಾರಿ, ಗಂಗಾಧರ ಬಡಿಗೇರ ಇದ್ದರು. ಶಿವಾನಿ ಸ್ವಾಗತಿಸಿ, ವಿಜಯಮಾಲಾ ಹಿರೂರ ನಿರೂಪಿಸಿ, ಸೌಮ್ಯ ವಂದಾಲ ವಂದಿಸಿದರು. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಟ್ಟಣದ ಸ್ವಚ್ಛತೆ ಕಾಯಕದಲ್ಲಿ ನಿರತರಾಗಿರುವ ಮಹಿಳಾ ಪೌರಕಾರ್ಮಿಕರನ್ನು ಸಂಸ್ಥೆಯಿಂದ ಸನ್ಮಾನಿಸಿದ್ದು ವಿಶೇಷ ಗಮನ ಸೆಳೆಯಿತು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮ ಮನಸೂರೆಗೊಂಡವು.