ಕಾರಟಗಿ ಸಮೀಪದ ಬಸವಣ್ಣ ಕ್ಯಾಂಪ್‌ನ ಉಣ್ಣಿ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿ ಅವಘಡ ಪ್ರಾತ್ಯಕ್ಷಿಕೆ ಇತ್ತೀಚೆಗೆ ನಡೆಯಿತು. ಅಗ್ನಿಶಾಮಕ ದಳದ ಠಾಣಾಧಿಕಾರಿ ಮಂಜುನಾಥ ಶಾಲಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಗ್ರಾಮಸ್ಥರಿಗೆ ಅಗ್ನಿ ಅವಘಡ ನಿಯಂತ್ರಿಸುವ ಕುರಿತು ಮಾಹಿತಿ ನೀಡಿದರು.

ಕಾರಟಗಿ: ಇಲ್ಲಿಗೆ ಸಮೀಪದ ಬಸವಣ್ಣ ಕ್ಯಾಂಪ್‌ನ ಉಣ್ಣಿ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿ ಅವಘಡ ಪ್ರಾತ್ಯಕ್ಷಿಕೆ ಇತ್ತೀಚೆಗೆ ನಡೆಯಿತು.

ಅಗ್ನಿಶಾಮಕ ದಳದ ಠಾಣಾಧಿಕಾರಿ ಮಂಜುನಾಥ ಶಾಲಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಗ್ರಾಮಸ್ಥರಿಗೆ ಅಗ್ನಿ ಅವಘಡ ನಿಯಂತ್ರಿಸುವ ಕುರಿತು ಮಾಹಿತಿ ನೀಡಿದರು.

ಜತೆಗೆ ಮನೆಗಳಲ್ಲಿ ಅಡುಗೆ ಅನಿಲ ಸೋರಿಕೆಯಾದಾಗ ಯಾವ ರೀತಿ ಕ್ರಮಕೈಗೊಳ್ಳಬೇಕು, ಶಾಲಾ, ಕಾಲೇಜ್, ಸಿನಿಮಾ ಮಂದಿರ, ವಸತಿ ನಿಲಯ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಮುನ್ನೆಚ್ಚರಿಕೆಯಾಗಿ ಯಾವ ಕ್ರಮ ಕೈಗೊಳ್ಳಬೇಕು. ಅದನ್ನು ನಂದಿಸಲು ಯಾವ ಅಸ್ತ್ರ ಉಪಯೋಗಿಸಬೇಕು ಎನ್ನುವ ಕುರಿತು ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಜಾಗೃತಿ ಮೂಡಿಸಿದರು.

ಅಗ್ನಿ ಅವಘಡ ಸಂಭವಿಸಿದಲ್ಲಿ ಸಾರ್ವಜನಿಕರು ಭಯಪಡದೆ ಅದನ್ನು ನಂದಿಸಲು ಪ್ರಯತ್ನಿಸಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ಕೂಡಲೆ ೧೧೨ ಸಂಖ್ಯೆಗೆ ಕರೆ ಮಾಡಿದರೆ ಅಗ್ನಿಶಾಮಕ ದಳಕ್ಕೆ ಅಗ್ನಿ ಅವಘಡ ಸಂಭವಿಸಿದ ಸ್ಥಳದ ಸಂಪೂರ್ಣ ಮಾಹಿತಿ ನೀಡಿ, ಆಗ ಅಗ್ನಿಶಾಮಕ ಸಿಬ್ಬಂದಿ ಆ ಸ್ಥಳಕ್ಕೆ ಕೂಡಲೆ ಬಂದು ತಲುಪುತ್ತಾರೆ. ಅಗ್ನಿಶಾಮಕ ದಳದಲ್ಲಿ ಅತ್ಯಾಧುನಿಕ ಸಲಕರಣೆಗಳು ಮತ್ತು ನುರಿತ ಸಿಬ್ಬಂದಿ ಇರುತ್ತಾರೆ. ನೀರು ಮತ್ತು ಅಗ್ನಿ ಅಫಘಾತಗಳು ಸೇರಿದಂತೆ ಯಾವುದೇ ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ಅಗ್ನಿಶಾಮಕ ದಳದಲ್ಲಿ ಎಲ್ಲ ಸೌಲಭ್ಯಗಳಿವೆ. ಇದರ ಅರಿವು ಪ್ರತಿಯೊಬ್ಬ ಸಾರ್ವಜನಿಕರಲ್ಲೂ ಇದ್ದರೆ ಅವಘಡ ತಪ್ಪಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ನಿಮ್ಮ ಮನೆಗಳಲ್ಲಿ ಒಲೆ ಮತ್ತು ಅಡುಗೆ ಅನಿಲದ ಸಿಲಿಂಡರ್‌ಗೆ ಐದು ಅಡಿ ಅಂತರವಿರಬೇಕು. ಸಿಲಿಂಡರ್‌ಗೆ ಕಾಲವಧಿ ಸೂಚಿಸಲು ಎಬಿಸಿಡಿ ಎಂಬುದಾಗಿ ತುದಿಯಲ್ಲಿ ನಮೂದಿಸಿರುವ ಇಸ್ವಿಗಳನ್ನು ಗಮನಿಸಬೇಕು. ಆ ಇಸ್ವಿಯ ಒಳಗೆ ಮಾತ್ರ ಅದನ್ನು ಬಳಸಬೇಕು. ಸರಬರಾಜುದಾರರು ಅವಧಿ ಮುಗಿದ ಸಿಲಿಂಡರ್‌ಗಳನ್ನು ನೀಡಿದ್ದಲ್ಲಿ ನಿಮಗೆ ಅದರ ಅರಿವಿರಬೇಕು. ಕೂಡಲೆ ಅದನ್ನು ಹಿಂತಿರುಗಿಸಬೇಕು ಎಂದು ಅಗ್ನಿ ಅವಘಡದ ಸಂಭವಿಸಿದಾಗ ಕೈಗೊಳ್ಳುವ ಮುನ್ನೆಚ್ಚರಿಕೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಹೊಸ್ಕೇರಪ್ಪ, ಮಂಜುನಾಥ, ಮಲ್ಲಿಕಾರ್ಜುನ, ಸಂಗಪ್ಪ, ಯಂಕಪ್ಪ, ಮಂಜುನಾಥ, ರವಿ ಹಾಗೂ ಶಾಲೆಯ ಸತೀಶ, ಮುಖ್ಯಗುರು ಮಹೇಶ ಹೊನಗುಡಿ, ಶಿಕ್ಷಕರಾದ ಪಲ್ಲವಿ, ಜಲ್ಲಿಕಾ, ಮಣಿಕುಮಾರಿ, ಸುಮಾ, ಮೌನೀಕ, ರಾಣಿ, ರಾಧಾ, ಶಾಮಸುಂದರ್, ಗವಿಸಿದ್ಧಪ್ಪ, ಮತ್ತು ಸಿಬ್ಬಂದಿ ಇದ್ದರು.