ಸಾರಾಂಶ
ಕೊಪ್ಪಳ:
ಜಿಲ್ಲಾ ಕೇಂದ್ರದ ಹತ್ತಿರದಲ್ಲೇ ಬೃಹತ್ ಕಾರ್ಖಾನೆ ಸ್ಥಾಪಿಸಿದ್ದರಿಂದ ಆಗಿರುವ ದುಷ್ಟರಿಣಾಮಗಳ ಕುರಿತು ಅಧಿವೇಶನದಲ್ಲಿ ಚರ್ಚಿಸುವಂತೆ ಜನಪ್ರತಿನಿಧಿಗಳಿಗೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಕೊನೆಯ ಅವಕಾಶ ನೀಡಿದ್ದು, ನೀವು ಮಾತನಾಡದಿದ್ದರೆ ವಿಧಾನಸೌಧ ಚಲೋ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದೆ.ಮಾ. ೨೩, ೨೪ರಂದು ಕುಷ್ಟಗಿ ತಾಲೂಕಿನ ತಾವರಗೇರ ಬುದ್ಧ ವಿಹಾರದಲ್ಲಿ ನಡೆಸಲು ಉದ್ದೇಶಿಸಿರುವ ಅಧ್ಯಯನ ಶಿಬಿರಕ್ಕೆ ಕಾರ್ಖಾನೆ ಬಾಧಿತ ಗ್ರಾಮಗಳ ಹೆಚ್ಚಿನ ಯುವಜನರನ್ನು ಭಾಗವಹಿಸುವಂತೆ ಮಾಡಲು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಕೊಪ್ಪಳದ ಬಲ್ಡೋಟಾ ಬಿಎಸ್‌ಪಿಎಲ್ ಕಂಪನಿಯ ಸ್ಪಾಂಜ್ ಐರನ್ ಮತ್ತು ಉಕ್ಕು ತಯಾರಿಕಾ ಘಟಕಕ್ಕೆ ವಿಸ್ತರಣೆಯ ಅನುಮತಿಯನ್ನು ಶಾಶ್ವತವಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿ ಕೊಪ್ಪಳ ಮತ್ತು ಬಾಧಿತ ಹಳ್ಳಿಗಳ ಜನರು ನಿರಂತರವಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಶ್ರೀಗವಿಮಠದ ಸ್ವಾಮೀಜಿ ಎದುರು ಹಾಗೂ ಬಹಿರಂಗ ಸಭೆಯಲ್ಲಿ ಪಕ್ಷಾತೀತವಾಗಿ ಈ ವಿಸ್ತರಣೆ ವಿರೋಧಿಸುತ್ತೇವೆ ಎಂದು ಸರ್ವಪಕ್ಷದ ಜನಪ್ರತಿನಿಧಿಗಳು ಹೇಳಿಕೊಂಡಿದ್ದರು. ಆದರೆ, ಯಾರು ಸಹ ಈ ಕುರಿತು ಅಧಿವೇಶನದಲ್ಲಿ ಚರ್ಚಿಸಿಲ್ಲ. ಅಧಿವೇಶನದಲ್ಲಿ ಚರ್ಚೆಗೆ ಈ ವಿಷಯ ತರದೆ ಇದ್ದರೆ ಜನರೊಂದಿಗೆ ವಿಧಾನಸೌಧದ ಮುಂದೆ ಬಂದು ಮಾತನಾಡುತ್ತೇವೆ ಎಂದು ಸಭೆ ತಿಳಿಸಿದೆ.ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗ ಸಿಎಂ ಬಳಿ ಹೋಗಿ ಕಾರ್ಖಾನೆ ಕೆಲಸಕ್ಕೆ ತಡೆ ನೀಡಿಸಿದ್ದನ್ನೇ ದೊಡ್ಡ ಸಾಧನೆ ಎನ್ನುವಂತೆ ಬಿಂಬಿಸಿಕೊಂಡು ಸುಮ್ಮನೆ ಕುಳಿತಿವೆ. ಕಾರ್ಖಾನೆ ವಿರೋಧಿ ಬಹಿರಂಗ ಸಭೆಯಲ್ಲಿ ವೀರಾವೇಶದಿಂದ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅಧಿವೇಶನದಲ್ಲಿ ಮೌನವಹಿಸಿದ್ದಾರೆ. ಈ ಮೂಲಕ ಆಡಳಿತ ಪಕ್ಷದೊಂದಿಗೆ ರಾಜೀ ಮಾಡಿಕೊಂಡು ಕಂಪನಿಗೆ ಬೆನ್ನೆಲುಬಾಗಿ ನಿಂತಂತೆ ಕಾಣುತ್ತಿದೆ. ಇದನ್ನು ಒಪ್ಪಲಾಗದು, ಜನರ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗುತ್ತದೆ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಎಚ್ಚರಿಸಿದೆ.
ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಜನತೆಗೆ ಕೊಟ್ಟ ಭರವಸೆಯಂತೆ ಬಿಎಸ್‌ಪಿಎಲ್ ವಿಸ್ತರಣೆ ಶಾಶ್ವತವಾಗಿ ಹಿಂಪಡೆದ ಆದೇಶವನ್ನು ಸರ್ಕಾರದಿಂದ ಹೊರಡಿಸಬೇಕು. ಇದಕ್ಕೆ ಎಲ್ಲ ಪಕ್ಷಗಳು ಬೆಂಬಲ ನೀಡಬೇಕು. ಕಾರ್ಖಾನೆಗಳ ಕುರಿತು ಶ್ವೇತ ಪತ್ರ ಹೊರಡಿಸಲು ಒತ್ತಡ ಹಾಕಬೇಕೆಂದು ಒತ್ತಾಯಿಸಿರುವ ಜಿಲ್ಲಾ ಬಚಾವೋ ಆಂದೋಲನ ಸಮಿತಿ, ಮುಂದಿನ ದಿನಗಳಲ್ಲಿ ನಿರಂತರ ಹೋರಾಟಕ್ಕೆ ಸಮಯ ನಿಗದಿ ನಿಗದಿ ಮಾಡಲು ನಿರ್ಧರಿಸಲಾಗಿದೆ.ಸಭೆಯಲ್ಲಿ ಸಮಿತಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಮುದುಕಪ್ಪ ಹೊಸಮನಿ, ಶರಣು ಪಾಟೀಲ್, ಶಿವಪ್ಪ ಹಡಪದ, ಶರಣು ಶೆಟ್ಟರ, ಲಕ್ಷ್ಮಣ ಪೀರಗಾರ, ಕಾಶಪ್ಪ ಛಲವಾದಿ ಇದ್ದರು.