ಸಾರಾಂಶ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಒಳಪಂಗಡಗಳಿಗೂ ಒಳಿತಾಗುವಂತೆ 2ಡಿ, 2ಸಿ ನೀಡಲು ಗೆಜೆಟ್ ಮಾಡಲಾಗಿದೆ. ಮೀಸಲಾತಿಯ ಶೇ. 80 ರಷ್ಟು ಕಾರ್ಯ ಪೂರ್ಣಗೊಳಿಸಿದ್ದೇವೆ
ನರಗುಂದ: ಜು.15ರಿಂದ ಪ್ರಾರಂಭವಾಗುವ ರಾಜ್ಯ ಮುಂಗಾರು ಅಧಿವೇಶನದಲ್ಲಿ ಪಂಚಮಸಾಲಿ ಮೀಸಲಾತಿ ಹಕ್ಕು ಪ್ರತಿಪಾದಿಸಲು ಧ್ವನಿ ಎತ್ತಬೇಕೆಂದು ಶಾಸಕ ಸಿ.ಸಿ. ಪಾಟೀಲರಿಗೆ ಪಂಚಮಸಾಲಿ ಆಗ್ರಹ ಪತ್ರ ಚಳವಳಿಯ ಪತ್ರವನ್ನು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ನೀಡಿ ಆಗ್ರಹಿಸಿದರು.
ಶನಿವಾರ ಶಾಸಕ ಸಿ.ಸಿ. ಪಾಟೀಲರ ಮನೆಗೆ ಆಗಮಿಸಿದ್ದ ಶ್ರೀಗಳು, ಸಮಾಜದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಔದ್ಯೋಗಿಕ ಒಳಿತಿಗಾಗಿ ಮೀಸಲಾತಿ ಅತೀ ಅವಶ್ಯ. ಹಲವಾರು ಬಾರಿ ಹಲವು ರೀತಿಯ ಹೋರಾಟ ಮಾಡುತ್ತಾ ಬಂದಿದ್ದೇವೆ. ಎಲ್ಲ ಪಕ್ಷಗಳಲ್ಲಿರುವ ಸಮಾಜದ ಪ್ರತಿನಿಧಿಗಳು ಮೀಸಲಾತಿಗಾಗಿ ಧ್ವನಿ ಎತ್ತಲೇಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಒಳಪಂಗಡಗಳಿಗೂ ಒಳಿತಾಗುವಂತೆ 2ಡಿ, 2ಸಿ ನೀಡಲು ಗೆಜೆಟ್ ಮಾಡಲಾಗಿದೆ. ಮೀಸಲಾತಿಯ ಶೇ. 80 ರಷ್ಟು ಕಾರ್ಯ ಪೂರ್ಣಗೊಳಿಸಿದ್ದೇವೆ. ಬಾಕಿ ಉಳಿದಿರುವ ಶೇ. 20 ಕೆಲಸ ಮಾತ್ರ ಆಗಬೇಕಾಗಿದೆ. ಸಮಾಜವು ಮೀಸಲಾತಿಗಾಗಿ ಯಾವುದೇ ಹೋರಾಟ ಕೈಗೊಂಡರು ತನುಮನ ಧನದಿಂದ ಹೋರಾಟದಲ್ಲಿ ಪಾಲ್ಗೊಳ್ಳಲು ಸಿದ್ಧ. ಅಧಿವೇಶನದಲ್ಲೂ ಮೀಸಲಾತಿ ಪರ ಧ್ವನಿ ಎತ್ತುವೆ ಎಂದು ಭರವಸೆ ನೀಡಿದರು.
ನಿಂಗಪ್ಪ ಪಿರೋಜಿ, ಡಾ. ಸಿ.ಕೆ.ರಾಚನಗೌಡ್ರ, ಎಸ್.ಡಿ. ಕೊಳ್ಳಿ, ಉಮೇಶಗೌಡ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಅನೀಲಕುಮಾರ ಪಾಟೀಲ, ಬಸಪ್ಪ ಮೆಣಸಗಿ, ಎಂ. ವಿ.ಪಾಟೀಲ, ಅರಹುಣಿಸಿ, ಗುರುಪಾದಪ್ಪ ಕುರಹಟ್ಟಿ, ಪ್ರಕಾಶ ಪಟ್ಟಣಶೆಟ್ಟಿ, ಸಿದ್ದು ಪಲ್ಲೇದ, ಶಿವರಾಜ ಶಿವನಗೌಡ್ರ, ಮಹೇಶ ಹಟ್ಟಿ, ಸಂಗಪ್ಪ ಪೂಜಾರ, ಪರಪ್ಪ ಸಾವಕಾರ, ಎ.ಎಸ್. ಮಾಳವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.