ಸಾರಾಂಶ
ಹಾನಗಲ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಸಂಘಟನೆ) ಡಿ. ೭ರಂದು ಹಾನಗಲ್ಲ ತಾಲೂಕು ಮಟ್ಟದ ರೈತ ಚಿಂತನ ಮಂಥನ, ರೈತ ಜಾಗೃತಿ, ಪ್ರಗತಿಪರ ರೈತರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗಾಗಿ ನಡೆದ ಸಾಮಾನ್ಯ ಲಿಖಿತ ಪರೀಕ್ಷೆ ವಿಜೇತರಿಗೆ ಸನ್ಮಾನ, ಬಹುಮಾನ ವಿತರಣೆ ನಡೆಯಲಿದೆ ಎಂದು ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಬಳಿಗಾರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಮಕ್ಕಳಿಗೆ ಕೃಷಿ ಶಿಕ್ಷಣ ಜ್ಞಾನ ಬೇಕು. ಅದಕ್ಕಾಗಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕೃಷಿ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ೭೨ ಪ್ರೌಢಶಾಲೆಗಳು, ೧೭ ಪದವಿ ಪೂರ್ವ ಕಾಲೇಜುಗಳ ೪೦೦ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಡಿ. ೭ರಂದು ವಿಜೇತ ೫ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತಿದೆ. ಅಲ್ಲದೆ ೫ ಪ್ರಗತಿಪರ ರೈತರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ಹಾಗೂ ಸಮಾಜ ಸೇವೆಯಲ್ಲಿ ಪ್ರಗತಿಪರವಾಗಿ ಸೇವೆ ಸಲ್ಲಿಸಿದ ಐವರಿಗೆ ಪುರಸ್ಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಚನ್ನಬಸಪ್ಪ ಹಾವಣಗಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸುವರು. ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ಡಿ. ಬಸವರಾಜ, ರಾಜ್ಯ ಮುಖಂಡ ಮಂಜಣ್ಣ ಮುದಯಪ್ಪನವರ ರೈತ ಜ್ಯೋತಿ ಬೆಳಗಿಸುವರು. ಯುವ ಮುಖಂಡ ರಾಜಶೇಖರ ಕಟ್ಟೆಗೌಡರ, ಅನಿತಾ ಡಿಸೋಜಾ, ತಹಸೀಲ್ದಾರ್ ಎಸ್. ರೇಣುಕಮ್ಮ, ಸಿಪಿಐ ಆಂಜನೇಯ, ಬಿಇಒ ವಿ.ವಿ. ಸಾಲಿಮಠ, ತಾಪಂ ಇಒ ಪರಶುರಾಮ ಪೂಜಾರ, ಕೃಷಿ ಅಧಿಕಾರಿ ಮಾರುತಿ ಅಂಗಾರಗಟ್ಟಿ, ಸಾಹಿತಿ ಮಾರುತಿ ಶಿಡ್ಲಾಪುರ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಬಸವರಾಜ ಪೂಜಾರ, ಬಸವರಾಜ ಬ್ಯಾತನಾಳ, ತಿರಕನಗೌಡ ಪಾಟೀಲ, ಸುಭಾಸ ಬ್ಯಾತನಾಳ, ಗುರುಶಾಂತಪ್ಪ ಪೂಜಾರ, ನಿಜಲಿಂಗಪ್ಪ ಮುದೆಪ್ಪನವರ, ಶಿವರಾಜ ದೇಸಾಯಿ ಇದ್ದರು.