ಸಾರಾಂಶ
೨೦೨೧ರಲ್ಲಿ ಸಭಾಭವನವನ್ನು ಉದ್ಘಾಟನೆ ಮಾಡಲಾಯಿತು. ಆದರೆ ಭೋಜನದ ಸಭಾಂಗಣ ಹಾಗೂ ಶೌಚಾಲಯ ನಿರ್ಮಾಣ ಮಾಡುವ ನೆಪದಲ್ಲಿ ಬೀಗ ಹಾಕಲಾಗಿದ್ದು, ಸಭಾಭವನದ ಸುತ್ತ ಈಗ ಗಿಡಗಂಟಿ ಬೆಳೆದಿವೆ.
ಸಂತೋಷ ದೈವಜ್ಞ
ಮುಂಡಗೋಡ: ಪಟ್ಟಣದ ರೈತ ಸಭಾಭವನ ಕಟ್ಟಡ ಹಾಳು ಬಿದ್ದು ಬರೋಬ್ಬರಿ 4 ವರ್ಷ ಕಳೆದರೂ ಕೇಳುವರಿಲ್ಲದಂತಾಗಿದ್ದು, ರೈತ ಭವನವೀಗ ಅಕ್ಷರಶಃ ಭೂತ ಬಂಗಲೆಯಂತಾಗಿದೆ.ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವತಿಯಿಂದ ೨೦೧೬ರಲ್ಲಿ ₹೬೦ ಲಕ್ಷ ವೆಚ್ಚದಲ್ಲಿ ಪ್ರಾರಂಭವಾದ ರೈತ ಭವನ ಕಾಮಗಾರಿ ಸುಮಾರು ೫ ವರ್ಷ ನಡೆಯಿತು. ೨೦೨೧ರಲ್ಲಿ ಸಭಾಭವನವನ್ನು ಉದ್ಘಾಟನೆ ಮಾಡಲಾಯಿತು. ಆದರೆ ಭೋಜನದ ಸಭಾಂಗಣ ಹಾಗೂ ಶೌಚಾಲಯ ನಿರ್ಮಾಣ ಮಾಡುವ ನೆಪದಲ್ಲಿ ಬೀಗ ಹಾಕಲಾಗಿದ್ದು, ಸಭಾಭವನದ ಸುತ್ತ ಈಗ ಗಿಡಗಂಟಿ ಬೆಳೆದಿವೆ.
ರೈತರು ಸಭೆ, ಸಮಾರಂಭಗಳನ್ನು ಮಾಡಬೇಕಾದರೆ ರೈತ ಸಮುದಾಯಕ್ಕೆ ತಾಲೂಕಿನಲ್ಲಿ ಯಾವುದೇ ಸಭಾಭವನವಿಲ್ಲದ ಹಿನ್ನೆಲೆ ಸಭಾಭವನ ನಿರ್ಮಾಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿದ್ದು, ಹಲವು ವರ್ಷಗಳ ಬಳಿಕ ತಾಲೂಕಿಗೊಂದು ರೈತ ಸಭಾಭವನ ಮಂಜೂರು ಮಾಡಿತ್ತು. ಸುಸಜ್ಜಿತ ಭವನ ನಿರ್ಮಾಣವಾಯಿತೆಂದು ರೈತ ಸಮುದಾಯ ಸಂತಸಗೊಂಡಿತ್ತು.ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆ ಕೂಡ ಮಾಡಲಾಗಿತ್ತು. ಭೋಜನದ ಸಭಾಂಗಣ ಹಾಗೂ ಶೌಚಾಲಯ ನಿರ್ಮಾಣ ಮಾಡುವ ನೆಪದಲ್ಲಿ ಮತ್ತೆ ಹೆಚ್ಚುವರಿ ₹೩೫ ಲಕ್ಷ ಮಂಜೂರು ಮಾಡಿ ಕಾಮಗಾರಿ ಟೆಂಡರ್ ಕರೆದು ಸಭಾಭವನಕ್ಕೆ ಬೀಗ ಹಾಕಿ ಸುಮಾರು ೩ ವರ್ಷ ಕಳೆದಿದೆ. ಇದರಿಂದ ಸಭಾಭವನ ನಿರ್ವಹಣೆ ಇಲ್ಲದೆ ಹಾಳು ಬಿದ್ದಿದೆ. ಇದರಿಂದ ರೈತ ಸಮುದಾಯಕ್ಕೆ ಭಾರೀ ನಿರಾಸೆ ಮೂಡಿಸಿದಂತಾಗಿದ್ದು, ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ರಾತ್ರಿ ವೇಳೆ ಈ ಭಾಗದಲ್ಲಿ ಜನಸಂದಣಿ ಇರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲವರು ರಾತ್ರಿಯಾಗುತ್ತಲೇ ಇಲ್ಲಿ ಜೂಜು, ಮದ್ಯಸೇವನೆ ಸೇರಿದಂತೆ ಅನೇಕ ಅನೈತಿಕ ಚಟುವಟಿಕೆ ಅಡ್ಡೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಹಾಳುಬಿದ್ದ ಈ ಕಟ್ಟಡವೀಗ ನಾಯಿ, ಹಂದಿ, ದನಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ.ಗುತ್ತಿಗೆದಾರರಿಂದ ವಿಳಂಬ: ಭೋಜನದ ಸಭಾಂಗಣ ಹಾಗೂ ಶೌಚಾಲಯ ನಿರ್ಮಾಣ ಮಾಡಲು ಗುತ್ತಿಗೆದಾರರು ತಡ ಮಾಡಿದ್ದರಿಂದ ವಿಳಂಬವಾಗಿದ್ದು, ಈಗ ಕಾಮಗಾರಿ ಪ್ರಗತಿಯಲ್ಲಿದ್ದು, ಅಂತಿಮ ಹಂತಕ್ಕೆ ತಲುಪಿದೆ. ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಉದ್ಘಾಟನೆ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಸಜ್ಜುಗೊಳಿಸಲಾಗುವುದು ಎಂದು ಮುಂಡಗೋಡ ಎಪಿಎಂಸಿ ಕಾರ್ಯದರ್ಶಿ ಮಹೇಶ ಮಟ್ಟಿ ತಿಳಿಸಿದರು.ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಪ್ರದಾನ
ಮುಂಡಗೋಡ: ಶಿರಸಿಯ ಟಿಎಸ್ಎಸ್ ವತಿಯಿಂದ ೨೦೨೩- ೨೪ನೇ ಸಾಲಿನ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ತಾಲೂಕಿನ ಬೆಡಸಗಾಂವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಪಡೆದಿದೆ.ಶಿರಸಿಯ ಟಿಎಸ್ಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸತತವಾಗಿ ೪ನೇ ವರ್ಷದ ಪ್ರಶಸ್ತಿಯನ್ನು ಸಂಘದ ಮುಖ್ಯಕಾರ್ಯನಿರ್ವಾಹಕ ಪ್ರದೀಪ ನಾಯ್ಕ ಪಡೆದುಕೊಂಡರು.