ಸಾರಾಂಶ
ಸಾಗರ: ಪ್ರತಿವರ್ಷ ಜನವರಿ 4ರಂದು ರೈತ ಸಂಘವು ಸಂಭ್ರಮದಿಂದ ಸಂಸ್ಥಾಪನಾ ದಿನವನ್ನು ಆಚರಣೆ ಮಾಡಿಕೊಂಡು ಬರುತ್ತಿತ್ತು. ಆದರೆ ಈ ಬಾರಿ ಸರ್ಕಾರ ಮತ್ತು ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತು ಅಂದು ಕರಾಳ ದಿನವನ್ನು ಆಚರಿಸುವ ತೀರ್ಮಾನ ಕೈಗೊಂಡಿದೆ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ರೈತ ಸಂಘ (ಡಾ.ಗಣಪತಿಯಪ್ಪ ಸ್ಥಾಪಿತ) ಜ. 4, 1948ರಲ್ಲಿ ಪ್ರಾರಂಭವಾಗಿದೆ. ಪ್ರತಿವರ್ಷ ಈ ದಿನವನ್ನು ಸಂಸ್ಥಾಪನಾ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿತ್ತು. ಆದರೆ ಸರ್ಕಾರ, ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಆಡಳಿತ ರೈತ ಸಂಘ ಮತ್ತು ರೈತರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರನ್ನು ಅತ್ಯಂತ ನಿಕೃಷ್ಟವಾಗಿ ನೋಡುವ ಪರಿಪಾಠ ಪ್ರಾರಂಭವಾಗಿದೆ. ಇದು ರೈತ ಸಂಘಕ್ಕೆ ತೀವ್ರ ನೋವು ತಂದಿದೆ. ಈ ಹಿನ್ನೆಲೆ ಜ.4ರಂದು ತಾಳಗುಪ್ಪದಲ್ಲಿ ರೈತ ಸಂಘ ಕರಾಳ ದಿನಕ್ಕೆ ಕರೆ ನೀಡಿದೆ ಎಂದು ಮಾಹಿತಿ ನೀಡಿದರು.ಅಂದು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ರೈತರು ಕಪ್ಪುಬಟ್ಟೆ ಧರಿಸಿ ಆಡಳಿತ ವೈಫಲ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಿದ್ದಾರೆ. ಅಹೋರಾತ್ರಿ ನಡೆಯುವ ಪ್ರತಿಭಟನೆ ಸಂದರ್ಭದಲ್ಲಿ ರೈತ ಸಂಘ ಅನೇಕ ಅಹವಾಲುಗಳನ್ನು ಸರ್ಕಾರ, ಸಚಿವರು, ಶಾಸಕರು, ಆಡಳಿತದ ಎದುರು ಇಡಲಿದೆ. ಸಚಿವರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಮನವಿ ಸ್ವೀಕರಿಸಿ ಅದಕ್ಕೆ ಸ್ಥಳದಲ್ಲಿಯೆ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಉಗ್ರಸ್ವರೂಪಕ್ಕೆ ಹೋಗುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ಬೇರೆಬೇರೆ ಭಾಗದಲ್ಲಿ ಸಾಮಾಜಿಕ ಬಹಿಷ್ಕಾರ ದೊಡ್ಡ ಪಿಡುಗಾಗಿದೆ. ಸಾಮಾಜಿಕ ಬಹಿಷ್ಕಾರ ನೀಡುವ ಮೂಲಕ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ. ಇದು ಒಂದು ರೀತಿಯಲ್ಲಿ ಆಧುನಿಕ ಅಸ್ಪೃಶ್ಯತೆಯೂ ಆಗಿದೆ. ಕುಟುಂಬಕ್ಕೆ ಬಹಿಷ್ಕಾರ ಹಾಕಿ ₹50 ಸಾವಿರವರೆಗೂ ದಂಡ ಪಡೆಯಲಾಗುತ್ತಿದೆ. ದಂಡ ಕಟ್ಟದೇ ಇದ್ದಲ್ಲಿ ಬೇರೆ ಬೇರೆ ರೀತಿಯಲ್ಲಿ ಹಿಂಸೆ ನೀಡಲಾಗುತ್ತಿದೆ. ತಕ್ಷಣ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. ಸಾಮಾಜಿಕ ಬಹಿಷ್ಕಾರವನ್ನು ಬೇರುಸಹಿತ ಕಿತ್ತೊಗೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಹೊಯ್ಸಳ ಗಣಪತಿಯಪ್ಪ, ಡಾ. ರಾಮಚಂದ್ರಪ್ಪ ಮನೆಘಟ್ಟ, ಚಂದ್ರು ಎಸ್., ವಿ.ಟಿ. ರಾಮಚಂದ್ರ ಸೂರನಗದ್ದೆ, ಸಂತೋಷ್, ಚಂದ್ರಪ್ಪ ಆಲಳ್ಳಿ ಹಾಜರಿದ್ದರು.