ಸಾರಾಂಶ
ನರಗುಂದ: 1980ರಲ್ಲಿ ನಡೆದ ನೀರಿನ ಕರ ವಿರುದ್ಧದ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲು ಹಾಗೂ ಸ್ಮಾರಕ ನಿರ್ಮಾಣ ಮಾಡದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರೈತ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದರು.
ಅವರು ಗುರುವಾರ ಪಟ್ಟಣದ ಮಿನಿವಿಧಾನ ಸೌಧದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ರೈತ ಸೇನೆ, ಕನ್ನಡಪರ ಸಂಘಟನೆ, ದಲಿತ ಸಂಘಟನೆ, ಜಯ ಕರ್ನಾಟಕ ಸಂಘಟನೆ, ಕರವೇ, ವಿವಿಧ ಸಂಘಟನೆ ಆಶ್ರಯದಲ್ಲಿ ವೀರಗಲ್ಲ ಸ್ಥಾಪನೆ ಮಾಡುವಂತೆ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿ ಮಾತನಾಡಿ,ರೈತ ಹೋರಾಟದಲ್ಲಿ ವೀರ ಮರಣ ಹೊಂದಿದ ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲ ಸದ್ಯ ಖಾಸಗಿ ಜಾಗೆಯಲ್ಲಿದೆ. ಆ ವೀರಗಲ್ಲನ್ನು ಸರ್ಕಾರಿ ಜಾಗೆಯಲ್ಲಿ ಸ್ಥಾಪನೆ ಮಾಡಿ ಸ್ಮಾರಕ ನಿರ್ಮಿಸಬೇಕೆಂದು ಕಳೆದ ನಾಲ್ಕು ದಶಕಗಳಿಂದ ಸರ್ಕಾರಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸರ್ಕಾರ ಸರ್ಕಾರಿ ಜಾಗೆಯಲ್ಲಿ ರೈತನ ವೀರಗಲ್ಲ ಮತ್ತು ಸ್ಮಾರಕ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಕ್ಕೆ ವೀರಗಲ್ಲ ಸ್ಥಾಪನೆ ಮಾಡಲು ಆಗಲ್ಲ ಎಂದರೆ ರೈತರು ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ವೀರಗಲ್ಲ ಸ್ಥಾಪನೆ ಮಾಡುತ್ತೇವೆ ಎಂದು ಸವಾಲು ಹಾಕಿದರು.
ತಾಲೂಕಾಡಳಿತ ಜು.15ರಂದು ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಜಿಲ್ಲಾಧಿಕಾರಿ ರೈತರ ಸಭೆ ಕರೆದು ಈ ವಿಷಯವಾಗಿ ಚರ್ಚಿಸಿ ವೀರಗಲ್ಲ ಮತ್ತು ಸ್ಮಾರಕ ನಿರ್ಮಾಣದ ಬಗ್ಗೆ ಭರವಸೆ ನೀಡಬೇಕೆಂದು ಆಗ್ರಹಿಸಿದರು.ತಹಸೀಲ್ದಾರ್ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಬಸಪ್ಪ ಹೂಗಾರ, ಚನ್ನು ನಂದಿ, ನಬಿಸಾಬ್ ಕಿಲ್ಲೇದಾರ, ವಿಠಲ ಜಾಧವ, ವಾಸುರಡ್ಡಿ ಹೆಬ್ಬಾಳ, ರಾಘವೇಂದ್ರ ಗುಜಮಾಗಡಿ, ವಿಜಯ ಕೋತಿನ, ಬಸವರಾಜ ತಾವರೆ, ರವಿ ಒಡೆಯರ, ಮಂಜುನಾಥ ದೊಡ್ಡಮನಿ ಸೇರಿದಂತೆ ಮುಂತಾದವರು ಇದ್ದರು.