ಸಾರಾಂಶ
ಸಿಎಂ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮತಿ ನಡೆ ಖಂಡನೀಯ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಖಂಡಿಸಿ ಶನಿವಾರ ನಡೆದ ರಾಜಭವನ ಚಲೋ ಹೋರಾಟದಲ್ಲಿ ನಾನೂ ಹಾಜರಾಗಬೇಕಿತ್ತು. ಆದರೆ ವಿಡಿಸಿಸಿ ಬ್ಯಾಂಕ್ ವಾರ್ಷಿಕ ಮಹಾಸಭೆ ಇದ್ದು, ಅದನ್ನು ಆರ್‌ಬಿಐ ನಿಯಮಗಳ ಪ್ರಕಾರ ನಡೆಸಲೇಬೇಕಿದ್ದರಿಂದ ನಾನು ಅನುಮತಿ ಮೇರೆಗೆ ರಾಜಭವನ ಚಲೋದಲ್ಲಿ ಭಾಗಿಯಾಗಿಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟನೆ ನೀಡಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದು ರಾಜ್ಯಪಾಲರ ನಡೆ ಸರಿಯಿಲ್ಲ. ರಾಜಭವನವನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯನವರ ಪ್ರಕರಣಕ್ಕೂ ಮೊದಲು ಇರುವ ಹಲವು ಪ್ರಕರಣಗಳ ಕುರಿತು ತೀರ್ಮಾನ ಆಗಬೇಕು. ಯಾರು ಮೊದಲು ತಪ್ಪು ಮಾಡಿದ್ದಾರೋ ಅವರಿಗೆ ಮೊದಲು ಶಿಕ್ಷೆಯಾಗಲಿ. ಅದೆಲ್ಲ ಬಿಟ್ಟು 2024ರ ಕೇಸ್ ಕುರಿತು ಅನುಮತಿ ನೀಡಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಆಪರೇಷನ್ ಕಮಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವಾನಂದ ಪಾಟೀಲ, ಬಿಜೆಪಿ ಯಾವತ್ತೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಎರಡು ಬಾರಿ ಅಧಿಕಾರಕ್ಕೆ ಬಂದಾಗಲೂ ಅವರು ಅದನ್ನೇ ಮಾಡಿದ್ದು, ಅವರಿಗೆ ಆಪರೇಷನ್ ಕಮಲ ಹೊಸತೇನಲ್ಲ. ಈಗಲೂ ಆಪರೇಷನ್ ಕಮಲ ಮಾಡೋ ಪ್ರಯತ್ನ ನಡೆದಿರಬಹುದು. ಆದರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಒಡೆತನದ ಸಕ್ಕರೆ ಕಾರ್ಖಾನೆ ಸಮಸ್ಯೆ ವಿಚಾರದ ಕುರಿತು ಮಾತನಾಡಲು ನಿರಾಕರಿಸಿದ ಅವರು, ಅದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಆ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ನೋಡಿಕೊಳ್ಳುತ್ತದೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಫುಟವಾಗಿ ಹೇಳಿದರು.
ನಷ್ಟದಲ್ಲಿರುವ ಮುಧೋಳದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 30 ವರ್ಷದ ಅವಧಿಗೆ ಲೀಸ್‌ಗೆ ಹರಾಜು ಮಾಡಲಾಗುತ್ತದೆ. ನಷ್ಟದಲ್ಲಿದ್ದ ಸಕ್ಕರೆ ಕಾರ್ಖಾನೆಗಳನ್ನು ಲೀಸ್ ನೀಡಲಾಗಿದ್ದು ಅವುಗಳೆಲ್ಲ ಈಗ ಲಾಭದಲ್ಲಿವೆ. ಬಿಜೆಪಿ ಸರ್ಕಾರ ಇದ್ದಾಗ ಎರಡು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು 40 ವರ್ಷಕ್ಕೆ ಲೀಸ್ ನೀಡಲಾಗಿದೆ. ನಮ್ಮ ಅವಧಿಯಲ್ಲಿ 30 ರಿಂದ 35ವರ್ಷಗಳವರೆಗೆ ಮಾತ್ರ ಲೀಸ್ ನೀಡಲಾಗುವುದು. ಈ ಬಾರಿ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಬಾಕಿ ಹಣ ಶೇ.99 ರಷ್ಟು ಪಾವತಿ ಮಾಡಲಾಗಿದೆ ಎಂದು ಹೇಳಿದರು.