ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರದಲ್ಲಿ ನಡೆಯುತ್ತಿರುವ 200ನೇ ಯ ವಿಜಯೋತ್ಸವದ ವೇದಿಕೆಯ ಕಾರ್ಯಕ್ರಮಗಳು ವಿಜೃಂಭಣೆಯಿಂದ ಮೂಡಿ ಬಂದವು.ಪ್ರಮುಖ ವೇದಿಕೆಯಾಗಿರುವ ಚನ್ನಮ್ಮಾಜಿ ವೇದಿಕೆಯಲ್ಲಿ ಮಧ್ಯಾಹ್ನ 3 ರಿಂದ ಆರಂಭಗೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು. ಗೀಗೀ ಪದ, ಡೊಳ್ಳಿನ ಪದ, ವಚನ ಗಾಯನ, ಶಹನಾಯಿ, ಜನಪದ ಸಂಗೀತ, ಭರತನಾಟ್ಯ, ನೋಡುಗರನ್ನು ವೇದಿಕೆಯ ಮುಂಭಾಗದಲ್ಲಿ ಹಿಡಿದಿಟ್ಟುಕೊಳ್ಳಲು ಯಶಸ್ವಿಯಾದವು. ಚಂಡೆ ವಾಲಿಯನ್, ತೈಯಂ ನೃತ್ಯ, ನೃತ್ಯ ರೂಪಕ, ನೆರದ ಜನರ ಮುಂದೆ ಸೈ ಎನ್ನಿಸಿಕೊಂಡರೇ, ಚಂದನವನದ ನಟ ದಿಗಂತ, ಐಂದ್ರಿತಾ, ಚಂದನ ಶೆಟ್ಟಿ, ಹಾಸ್ಯಗಾರ ಯೋಗೀಗೌಡ ತಂಡ ನೆರದ ಜನರಿಗೆ ಸಂಗೀತದ ಹಾಗೂ ಹಾಸ್ಯ ಉಣ ಬಡಿಸಿದರು. ಓಡಿಸ್ಸಿ ಡ್ಯಾನ್ಸ್, ಚಿತ್ರಕಲೆ, ನೊಡುಗರನ್ನು ರೊಮಾಂಚನಗೊಳಿಸಿದರೆ, ಸರಿಗಮಪ ತಂಡದ ರಸಮಂಜರಿ ಕಾರ್ಯಕ್ರಮವೂ ಸಂಗೀತದ ಕಡಲಲ್ಲಿ ಎಲ್ಲ ಜನರನ್ನು ಕೊಂಡೊಯ್ಯಿತು.2ನೇ ವೇದಿಕೆಯಾದ ಸರ್ದಾರ ಗುರುಶಿದ್ದಪ್ಪ ವೇದಿಕೆಯಲ್ಲಿ ನಾಡಿನ ಸಂಸ್ಕೃತಿ ಬಿತ್ತರಗೊಂಡಿತು. ನಶಿಸುತ್ತಿರುವ ಗ್ರಾಮೀಣ ಪ್ರದೇಶದ ಕಲೆಗಳನ್ನು ಈ ವೇದಿಕೆಯಲ್ಲಿ ಪ್ರಸ್ತುತ ಪಡಿಲಾಯಿತು. ತತ್ವಪದ, ಯೋಗ, ಭಜನಾ, ಸಂಗೀತಾ, ಶಹನಾಯಿ, ನೃತ್ಯ , ನೃತ್ಯ ರೂಪಕ, ವಚನ ಗಾಯನ, ಡೊಳ್ಳಿನ ಪದ, ಸುಗಮ ಸಂಗೀತ, ಜಾನಪದ ಗಾಯನ, ಸಿತಾರ ವಾದನ, ತತ್ವಪದ, ಜಾನಪದ ಸಂಗೀತ, ಸೋಬಾನ ಪದ, ಲಾವಣಿ ಪದ, ಪ್ರಸ್ತುಗೊಂಡು ನಮ್ಮ ನಾಡಿನ ಗ್ರಾಮೀಣ ಭಾಗದ ಕಲೆ ಹಾಗೂ ಅದರ ವಿಶೇಷತೆ ಮತ್ತು ಅದರ ನೈಜತೆಯ ಅರಿವು ಮೂಡಿಸಿತು. ಈ ವೇದಿಕೆಯಯೂ ಸಹ ಜನರನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳಲು ಯಶಸ್ಸು ಕಂಡಿದ್ದು ಕಲಾವಿದರಲ್ಲಿ ಸಂತಸ ಮೂಡಿಸಿತು.