ಸಾರಾಂಶ
ಕಳೆದ ಐದು ವರ್ಷದಿಂದ ರಾಜಗೋಪುರ ಪೂರ್ಣಗೊಂಡಿದ್ದರೂ ಸಹ ಲೋಕಾರ್ಪಣೆಗೆ ಮುಂದಾಗಿಲ್ಲ, ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾಗಿರುವ ಯಾತ್ರಿ ನಿವಾಸ ಕಟ್ಟಡದ್ದು ಇದೇ ಸ್ಥಿತಿ, ಈಗಾಗಲೇ ರಾಜಗೋಪುರ ಬಣ್ಣ ಕಳೆದುಕೊಳ್ಳುತ್ತಿದೆ. ಶಾಸಕರು ಯಾಕೋ ಏನೋ ಮುಖ್ಯಮಂತ್ರಿಗಳಿಂದಲೇ ಲೋಕಾರ್ಪಣೆ ಮಾಡಿಸಬೇಕೆಂಬ ಬಯಕೆ ಇದ್ದರೂ ಸಹ ಅದಕ್ಕಾಗಿ ಇಷ್ಟು ದಿನ ಕಾಯಬೇಕಿರಲಿಲ್ಲ, ಹುಳಿಯಾರ್ ರಸ್ತೆಯಲ್ಲಿ ತಿರುಪತಿಗೆ ಹೋಗುವ ತಿರುವಿನಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಿಸಬೇಕೆಂಬುದು ಭಕ್ತರ ಬೇಡಿಕೆಯಾಗಿದೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಳೆದ ಐದು ವರ್ಷದಿಂದ ರಾಜಗೋಪುರ ಪೂರ್ಣಗೊಂಡಿದ್ದರೂ ಸಹ ಲೋಕಾರ್ಪಣೆಗೆ ಮುಂದಾಗಿಲ್ಲ, ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾಗಿರುವ ಯಾತ್ರಿ ನಿವಾಸ ಕಟ್ಟಡದ್ದು ಇದೇ ಸ್ಥಿತಿ, ಈಗಾಗಲೇ ರಾಜಗೋಪುರ ಬಣ್ಣ ಕಳೆದುಕೊಳ್ಳುತ್ತಿದೆ.ಇಲ್ಲಿನ ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಶಾಸಕರ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ, ಭಕ್ತರೂ ಸಹ ಇದನ್ನು ಸ್ವಾಗತಿಸಿದ್ದಾರೆ, ಆದರೆ ಶಾಸಕರು ಯಾಕೋ ಏನೋ ಮುಖ್ಯಮಂತ್ರಿಗಳಿಂದಲೇ ಲೋಕಾರ್ಪಣೆ ಮಾಡಿಸಬೇಕೆಂಬ ಬಯಕೆ ಇದ್ದರೂ ಸಹ ಅದಕ್ಕಾಗಿ ಇಷ್ಟು ದಿನ ಕಾಯಬೇಕಿರಲಿಲ್ಲ, ಹುಳಿಯಾರ್ ರಸ್ತೆಯಲ್ಲಿ ತಿರುಪತಿಗೆ ಹೋಗುವ ತಿರುವಿನಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಿಸಬೇಕೆಂಬುದು ಭಕ್ತರ ಬೇಡಿಕೆಯಾಗಿದೆ, ಜೇನುಕಲ್ ಸಿದ್ದೇಶ್ವರ ಕ್ಷೇತ್ರಕ್ಕೆ ನಿರ್ಮಾಣ ಮಾಡಿರುವ ರೀತಿಯಲ್ಲಿ ಒಂದು ಮಹಾ ದ್ವಾರವನ್ನು ಶಾಸಕರು ನಿರ್ಮಾಣ ಮಾಡಿಸಬೇಕೆಂಬುದು ಭಕ್ತರ ಒತ್ತಾಯವಾಗಿದೆ, ಶಾಸಕರ ಗಮನಕ್ಕೆ ಭಕ್ತರ ಬೇಡಿಕೆಯನ್ನು ಒಮ್ಮೆ ಪತ್ರಿಕೆ ತಂದಿತ್ತು ಸಕಾರಾತ್ಮಕವಾಗಿ ಶಾಸಕರು ಸ್ವೀಕರಿಸಿದ್ದರು,
ದೇವಾಲಯದ ಪ್ರಾಕಾರದ ಒಳಗಡೆ ಪುರಾತನ ಕಾಲದಿಂದ ಇದ್ದ ಚಪ್ಪಡಿಗಳನ್ನು ತೆಗೆಸಿ ಮಾರ್ಬಲ್‌ಗಳನ್ನು ಹಾಕಲಾಗಿದೆ. ಬಿಸಿಲಿನ ಜಳಕ್ಕೆ ಮಾರ್ಬಲ್ ಚಪ್ಪಡಿಗಳು ಕಾಯುವುದರಿಂದ ದೋಸೆ ಕಾವಲಿಯ ಮೇಲೆ ನಡೆದಂತೆ ಆಗುತ್ತದೆ ಇದರಿಂದಾಗಿ ಬೆಳಗ್ಗೆ 10 ಗಂಟೆ ನಂತರ ಸಂಜೆ 5ರವರೆಗೂ ಭಕ್ತರು ದೇವಾಲಯ ಪ್ರದಕ್ಷಿಣೆ ಹಾಕಲು ಸಾಧ್ಯವಾಗುತ್ತಿಲ್ಲ, ಥರ್ಮಾಪ್ಲಾಸ್ಟ್ ಪೇಂಟನ್ನು 4 ಅಡಿ ಅಗಲಕ್ಕೆ ದೇವಾಲಯದ ಸುತ್ತ ಬಳಿಸಿದ್ದರು, ಅದು ಇಲ್ಲವಾಗಿದೆ. ಅಲ್ಲದೆ ಇದು ಕೇವಲ 5ರಿಂದ 10 ಡಿಗ್ರಿ ಟೆಂಪರೇಚರ್ ಅನ್ನು ಕಡಿಮೆ ಮಾಡಬಹುದಷ್ಟೇ, ದೇವಾಲಯದ ಸುತ್ತ ಪೂರ್ವಿಕರು ಅಳವಡಿಸಿದ್ದ ಚಪ್ಪಡಿಗಳ ನಡುವೆ ಹುಲ್ಲು ಬೆಳೆಯುತ್ತಿತ್ತು, ಎಂತಹ ಬಿಸಿಲಿದ್ದರೂ ಸಹ ಇದರ ನೆರವನ್ನು ಪಡೆದು ಭಕ್ತರು ಪ್ರದಕ್ಷಿಣೆ ಹಾಕುತ್ತಿದ್ದರು, ಈಗ ಅದು ಇಲ್ಲವಾಗಿದೆ, ಮಾರ್ಬಲ್ ಜೋಡಣೆ ದೇವಾಲಯ ಪ್ರಾಕಾರಕ್ಕೆ ಸೌಂದರ್ಯವನ್ನು ತಂದು ಕೊಟ್ಟಿದೆ, ಇದರಲ್ಲಿ ಎರಡು ಮಾತಿಲ್ಲ, ಆದರೆ ಪ್ರದಕ್ಷಣೆಗೆ ಪರ್ಯಾಯ ವ್ಯವಸ್ಥೆಯನ್ನು ದೇವಾಲಯ ಅಭಿವೃದ್ಧಿ ಸಮಿತಿಯಾಗಲಿ ದೇವಾಲಯ ಸಮಿತಿಯಾಗಲಿ, ತುರ್ತಾಗಿ ಮಾಡಬೇಕಿದೆ, ದೂರದಿಂದ ಬರುವ ಭಕ್ತರಿಗೆ ದೇವಾಲಯ ಪ್ರದಕ್ಷಿಣೆ ಹಾಕದಿದ್ದಲ್ಲಿ ಮನಸ್ಸಿನಲ್ಲಿ ಏನೋ ಒಂದು ತರಹ ಕಸಿವಿಸಿ ಉಂಟಾಗುತ್ತಿದೆ. ಕಾಯರ್ ಮ್ಯಾಟ್ ಸಹ ಬಿಸಿಲ ಜಳಕ್ಕೆ ಬಿಸಿಯಾಗುತ್ತದೆ, ಥರ್ಮೋ ಪ್ಲ್ಯಾಸ್ಟ್ ಪೇಂಟನ್ನು ಆಗಾಗ ಬಳಿಸುವುದರಿಂದ ಸ್ವಲ್ಪಮಟ್ಟಿನ ಪರಿಹಾರ ದೊರಕಿದಂತಾಗುತ್ತದೆ, ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯು ಆಸಕ್ತಿ ವಹಿಸಲಿ ಎಂಬುದು ಭಕ್ತರ ಕೋರಿಕೆಯಾಗಿದೆ