ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ರಾಜನಹಳ್ಳಿಯಲ್ಲಿ ಸಾರ್ವಜನಿಕ ರಸ್ತೆಯಲ್ಲೇ ಒಕ್ಕಣೆ ಮಾಡುವ ಮೂಲಕ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಈ ಅವ್ಯವಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಳೆಹೊಳೆ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ಹರಿಹರ-ಎಳೆಹೊಳೆ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಈ ಕಾರಣಕ್ಕೆ ರಾಜನಹಳ್ಳಿ ಗ್ರಾಮದೊಳಗಿನ ಸುಮಾರು ೨ ಕಿ.ಮೀ. ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅಂದಿನಿಂದಲೂ ಕೆಲವರು ಅಲ್ಲಲ್ಲಿ ಒಂದು ಪಥದ ರಸ್ತೆಯನ್ನು ಅತಿಕ್ರಮಿಸಿಕೊಂಡು, ದವಸ ಧಾನ್ಯಗಳ ಒಕ್ಕಲು ಮಾಡುವುದು, ತಮ್ಮ ಮನೆ ಅಂಗಳವೆಂಬಂತೆ ವಾಹನಗಳ ನಿಲ್ಲಿಸುವುದು, ಕಾಳು-ಕಡಿ ಒಣಗಿಸಲು, ಕುಳಿತುಕೊಂಡು ಹರಟೆ ಹೊಡೆಯಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
100-200 ಮೀಟರ್‌ಗಳ ಅಂತರದಲ್ಲಿ ಒಂದೊಂದು ಪಥವನ್ನು ಸಂಪೂರ್ಣ ಬಂದ್ ಮಾಡಿರುತ್ತಾರೆ. ಇದರಿಂದಾಗಿ ವಾಹನಗಳನ್ನು ಎಡಕ್ಕೆ-ಬಲಕ್ಕೆ ತಿರುಗಿಸುತ್ತ, ಹರಸಾಹಸಪಟ್ಟು ಗ್ರಾಮವನ್ನು ದಾಟಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಬಸ್, ಲಾರಿ ಸೇರಿದಂತೆ ಸರಕು ಸಾರಿಗೆ ವಾಹನಗಳು ತಿರುವಿನಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಆಟೋ, ಕಾರು, ದ್ವಿಚಕ್ರ ವಾಹನಗಳವರು ಸರ್ಕಸ್ ಮಾಡಿಕೊಂಡೇ ಸಾಗಬೇಕಾಗಿದೆ. ತಿರುವಿನಲ್ಲಿ ದ್ವಿಚಕ್ರ ವಾಹನಗಳ ಸವಾರರು ಜಾರಿಬಿದ್ದು ಗಾಯಗೊಂಡ ಪ್ರಕರಣಗಳೂ ನಡೆಯುತ್ತಿವೆ. ಇನ್ನು ಈ ರಸ್ತೆಯಲ್ಲಿ ರಾತ್ರಿ ಸಂಚಾರವಂತೂ ಹೇಳುವಂತಿಲ್ಲ. ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ ಎಂದು ದೂರಿದ್ದಾರೆ.ಈ ಸಂಬಂಧ ವಾಹನ ಸವಾರರು ಮತ್ತು ರಸ್ತೆ ದುರ್ಬಳಕೆ ಮಾಡಿಕೊಳ್ಳುವವರ ಮಧ್ಯೆ ಹಲವಾರು ಸಲ ವಾಗ್ವಾದಗಳಾಗಿವೆ. ಒಂದು ಪಥದ ರಸ್ತೆ ಬೇಕಾದರೆ ಬಳಸಿಕೊಳ್ಳಿ, ಇನ್ನೊಂದು ಪಥದ ರಸ್ತೆಯನ್ನಾದರೂ ನೇರವಾಗಿ ವಾಹನ ಸಂಚಾರಕ್ಕೆ ಬಿಟ್ಟುಕೊಡಿ ಎಂದು ಕೇಳಿದ್ದೂ ಆಗಿದೆ. ಆದರೆ, ಹೀಗೆ ಪ್ರಶ್ನಿಸುವ ವಾಹನ ಸವಾರರನ್ನು ಹೆದರಿಸಿ, ಬಾಯಿ ಮುಚ್ಚಿಸಿ, ಮುಂದೆ ಸಾಗಿಸಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆ ಪರಿಹರಿಸುವಂತೆ ಈಗಾಗಲೆ ಹಲವು ಸಲ ಮೌಖಿಕವಾಗಿ ಮನವಿ ಮಾಡಲಾಗಿದೆ. ಹೀಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಳೆಹೊಳೆ ಮಾರ್ಗದ ತಿಮ್ಮಲಾಪುರ, ಬಿಳಸನೂರು, ಹೊಸಹಳ್ಳಿ, ನಂದಿಗಾವಿ, ಧೂಳೆಹೊಳೆ, ಎಳೆಹೊಳೆ ಮತ್ತಿತರ ಗ್ರಾಮಸ್ಥರು ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.ಸುಗ್ಗಿ ಕಾಲ ಮಾತ್ರವಲ್ಲದೇ, ವರ್ಷಪೂರ್ತಿ ರಾಜಾರೋಷವಾಗಿ ರಸ್ತೆ ದುರ್ಬಳಕೆ ನಡೆದಿದೆ. ಆದರೆ, ಯಾವುದೇ ಜನಪ್ರತಿನಿಧಿಗಳಾಗಲಿ, ರಾಜನಹಳ್ಳಿ, ನಂದಿಗಾವಿ, ಎಳೆಹೊಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಲಿ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ. ಸೂಕ್ತ ಕ್ರಮ ಕೈಗೊಂಡು, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಲೊಕೋಪಯೋಗಿ ಎಇಇ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸ್ಪಂದಿಸದಿದ್ದರೆ ಈ ಮಾರ್ಗದ ಎಲ್ಲ ಗ್ರಾಮಸ್ಥರು, ಸಾರ್ವಜನಿಕರು ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
- - -ಕೋಟ್ ಈಗಾಗಲೇ ಹಲವು ಸಲ ಎಚ್ಚರಿಕೆ ನೀಡಿದ್ದರೂ ರಾಜಹಳ್ಳಿ ಗ್ರಾಮದಲ್ಲಿ ಕೆಲವರು ರಸ್ತೆ ಅತಿಕ್ರಮಿಸಿ, ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮುಂದುವರಿದಿದೆ. ಪೊಲೀಸ್ ಇಲಾಖೆ ಸಹಕಾರದೊಂದಿಗೆ ಸಮಸ್ಯೆ ನಿವಾರಿಸಲಾಗುವುದು
- ಶಿವಮೂರ್ತಿ, ಎಇಇ, ಲೋಕೋಪಯೋಗಿ ಇಲಾಖೆ- - - -೯ಎಚ್‌ಆರ್‌ಆರ್೧:
ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಹಾದುಹೋಗಿರುವ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿ, ರೈತರು ಒಕ್ಕಣೆ ಮಾಡುತ್ತಿರುವುದು.