ಸಾರಾಂಶ
ಕಳಸಾರಾಧನೆ ಮಾಡಿ ಕುಂಭಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಭಟ್ಕಳ: ಪಟ್ಟಣದ ಮುಖ್ಯರಸ್ತೆಯಲ್ಲಿರುವ ರಾಜಾಂಗಣ ನಾಗಬನದ ವರ್ಧಂತ್ಯುತ್ಸವ ಮತ್ತು ರಜತ ಕವಚ ಸಮರ್ಪಣಾ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ವರ್ಧಂತಿ ಉತ್ಸವದ ಪ್ರಯುಕ್ತ ಬೆಳಗ್ಗೆಯಿಂದಲೇ ಕಲಾವೃದ್ಧಿ ಹೋಮ, ಕಳಸಾರಾಧನೆ ಮಾಡಿ ಕುಂಭಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಆನಂತರ ದೇವರಿಗೆ ನೂತನವಾಗಿ ₹7 ಲಕ್ಷ ವೆಚ್ಚದಲ್ಲಿ ತಯಾರಿಸಿದ 3 ರಜತ ಕವಚ ಸಮರ್ಪಿಸಲಾಯಿತು. ಇದಕ್ಕೂ ಪೂರ್ವದಲ್ಲಿ ರಜತ ಕವಚವನ್ನು ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಮೆರವಣಿಗೆ ಮೂಲಕ ತರಲಾಯಿತು.ಮಹಾಪೂಜೆ ಸಂದರ್ಭದಲ್ಲಿ ನಡೆದ ಭಜನಾ ಸಂಕೀರ್ತನೆ ಹಾಗೂ ಭಜನಾ ಕುಣಿತ ಎಲ್ಲರ ಗಮನ ಸೆಳೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಮಹಾಪೂಜೆ ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು. ಮುಖ್ಯರಸ್ತೆಯಲ್ಲಿ ಭಕ್ತರಿಗೆ ನೂಕುನುಗ್ಗಲು ಆಗದಂತೆ ಸಮಿತಿ ವತಿಯಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.
ಪ್ರಮುಖರಾದ ಮಂಜುನಾಥ ನಾಯ್ಕ, ದಿನೇಶ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಜಗದೀಶ ಮಹಾಲೆ, ಶ್ರೀಕಾಂತ ನಾಯ್ಕ, ರಾಜೇಶ ಮಹಾಲೆ, ಕೇಶವ ನಾಯ್ಕ, ದೀಪಕ ನಾಯ್ಕ, ಶ್ರೀಪಾದ ಕಂಚುಗಾರ ಮುಂತಾದವರಿದ್ದರು.ಭಟ್ಕಳ ಪಟ್ಟಣದ ರಾಜಾಂಗಣ ನಾಗಬನದ ವರ್ಧಂತ್ಯುತ್ಸವ ಮತ್ತು ರಜತ ಕವಚ ಸಮರ್ಪಣಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.